ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಮುಕುಟವಾಗುವರೇ ?

ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಘಟನಾತ್ಮಕ ವಿಚಾರಗಳಿಂದಾಗಿ ಇತ್ತೀಚೆಗೆ ಬಹಳ ಸುದ್ದಿಯಲ್ಲಿದೆ. ಬಹುಕೋಟಿ ರೂಪಾಯಿ ಮೌಲ್ಯದ ಶಾರದಾ ಚಿಟ್​ಫಂಡ್ ಹಗರಣ ಬೆಳಕಿಗೆ ಬಂದ ನಂತರದಲ್ಲಿ ಟಿಎಂಸಿಯೊಳಗೆ ತಲ್ಲಣ ಆರಂಭವಾಗಿದೆ. ಇದರ ಬೆನ್ನಲ್ಲೇ ಪಕ್ಷದ ಸ್ಥಾಪಕ ಸದಸ್ಯರೊಳಗೇ ಕಂಡುಬಂದ ಬಿರುಕು ಇದೀಗ ನಂ.2 ಸ್ಥಾನದಲ್ಲಿದ್ದ ಮುಕುಲ್ ರಾಯ್(63) ಉಚ್ಚಾಟನೆಯೊಂದಿಗೆ ಕಂದಕ ವಾಗಿ ಮಾರ್ಪಟ್ಟಿದೆ. ಪಕ್ಷದ ಚುನಾವಣಾ ತಂತ್ರಗಾರರಾಗಿದ್ದ ಮುಕುಲ್ ರಾಯ್ ಅವರ ಮುಂದಿನ ನಡೆಯ ಬಗ್ಗೆ ಮೂಡಿರುವ ಕುತೂಹಲದ ಕಾರಣದಿಂದ ಅವರೀಗ ಸುದ್ದಿಯ ಕೇಂದ್ರ ಬಿಂದು.

1946DACತೃಣಮೂಲ ಕಾಂಗ್ರೆಸ್ ಎಂದರೆ ಮಮತಾ ಬ್ಯಾನರ್ಜಿ ಎಂಬ ಇಮೇಜ್ ಇದೆಯಾದರೂ, ರಾಜಕೀಯ ಮತ್ತು ಚುನಾವಣಾ ತಂತ್ರಗಾರಿಕೆಯ ವಿಷಯಕ್ಕೆ ಬಂದಾಗ ಬಿಜೆಪಿಯಲ್ಲಿ ಅಮಿತ್ ಷಾಗೆ ಎಷ್ಟು ಪ್ರಾಮುಖ್ಯತೆ ಇದೆಯೋ ಅಷ್ಟೇ ಪ್ರಾಮುಖ್ಯ ಟಿಎಂಸಿನಲ್ಲಿ ಮುಕುಲ್ ರಾಯ್ಗೆ ಇತ್ತು. ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ನಂತರದ ಸ್ಥಾನ ಮುಕುಲ್​ದೇ ಆಗಿತ್ತು, ಅಷ್ಟರ ಮಟ್ಟಿನ ಪ್ರಭಾವಿಯಾಗಿದ್ದರು. ಅದು ತೊಂಭತ್ತರ ದಶಕದ ಮಾತು. ಮುಕುಲ್ ರಾಯ್ ಆಗಿನ್ನೂ ಪೂರ್ಣ ಪ್ರಮಾಣದ ರಾಜಕಾರಣಕ್ಕೆ ಇಳಿದಿರಲಿಲ್ಲ. ವಿದ್ಯುತ್ ಸಾಮಗ್ರಿಗಳನ್ನು ಪೂರೈಸುತ್ತಿದ್ದ ವ್ಯಾಪಾರಿಯಾಗಿದ್ದರು. ಯುವ ಕಾಂಗ್ರೆಸ್​ನಲ್ಲಿದ್ದ ಮಮತಾ ಬ್ಯಾನರ್ಜಿ ಪರಿಚಯವಾಗಿದ್ದರು. ಹಾಗೆ ಅವರ ಪ್ರಭಾವಕ್ಕೆ ಒಳಗಾದ ಮುಕುಲ್ ನಿಧಾನವಾಗಿ ರಾಜಕೀಯದತ್ತ ವಾಲಿದರು. ಬಳಿಕ ಮಮತಾ ಯುವ ಕಾಂಗ್ರೆಸ್ ಅಧ್ಯಕ್ಷರಾದಾಗ ಅವರ ನಾಯಕತ್ವದಡಿ ಬಂಗಾಳದಲ್ಲಿ ಕೆಲಸ ಮಾಡಿದರು. 1997ರಲ್ಲಿ ಕಾಂಗ್ರೆಸ್ ತ್ಯಜಿಸುವುದಕ್ಕೆ ಮಮತಾ ನಿರ್ಧರಿಸಿದಾಗ ಅವರ ಬೆನ್ನಿಗೆ ನಿಂತವರು ಈ ಮುಕುಲ್. ಅದೇ ವರ್ಷ ಡಿಸೆಂಬರ್ 17ರಂದು ತೃಣಮೂಲ ಕಾಂಗ್ರೆಸ್ ಪಕ್ಷ ಸ್ಥಾಪಿಸಿದಾಗ ಅದರ ದಾಖಲೆಗಳಿಗೆ ಮೊದಲ ಸಹಿ ಮಮತಾರದ್ದು ಬಿದ್ದರೆ, ಎರಡನೇ ಸಹಿ ಮುಕುಲ್ ಅವರದ್ದೇ ಇತ್ತು. ಹೀಗಾಗಿ ಅವರು ಅಂದಿನಿಂದಲೂ ನಂ.2 ಎಂದೇ ಪಕ್ಷದಲ್ಲಿ ಬಿಂಬಿಸಲ್ಪಟ್ಟವರು. ಪಕ್ಷ ಸಂಘಟನೆಗೆ ಅವರಿಗೆ ನಿಜವಾದ ಅವಕಾಶ ಒದಗಿಸಿದ್ದು, ನಂದಿಗ್ರಾಮ ಮತ್ತು ಸಿಂಗೂರು ಪ್ರತಿಭಟನೆಗಳು. ಈ ಸಂದರ್ಭದಲ್ಲಿ ಮಮತಾರ ಜತೆಗೆ ನಿಂತವರು ಇದೇ ಮುಕುಲ್. 2006ರ ಏಪ್ರಿಲ್​ನಲ್ಲಿ ರಾಜ್ಯಸಭೆಗೆ ಆಯ್ಕೆಯಾದ ಅವರು, ಮುಂದೆ ಸಂಸತ್ತಿನ ಹಲವು ಸಮಿತಿಗಳ ಸದಸ್ಯರಾದರು. 2008ರ ಏಪ್ರಿಲ್​ನಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದರು. 2009ರಲ್ಲಿ ಯುಪಿಎ ಸರ್ಕಾರದಲ್ಲಿ ಅವರು ಹಡಗು ಸಾರಿಗೆ ಖಾತೆಯ ರಾಜ್ಯ ಸಚಿವರಾದರು. 2011ರಲ್ಲಿ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷದ ಚುನಾವಣಾ ತಂತ್ರಗಾರಿಕೆಯ ಹೊಣೆ ಮುಕುಲ್ ರಾಯ್ ಹೆಗಲೇರಿತ್ತು. ಅಂದು ಸನ್ನಿವೇಶ ಹೇಗಿತ್ತು ಎಂದರೆ, ಮಮತಾ ಬ್ಯಾನರ್ಜಿ ಕ್ರೌಡ್ ಪುಲ್ಲರ್ ಆಗಿ ನಾಯಕಿಯ ಕೆಲಸ ಮಾಡುತ್ತಿದ್ದರೆ, ಪಕ್ಷದ ಚುನಾವಣಾ ತಂತ್ರಗಾರರಾಗಿ ಮುಕುಲ್ ರಾಯ್ ಮತಪರಿವರ್ತಕರಾಗಿ ಕೆಲಸಮಾಡಿದರು. ಪರಿಣಾಮ, ಪಶ್ಚಿಮ ಬಂಗಾಳದಲ್ಲಿ 34 ವರ್ಷಗಳ ಎಡರಂಗ ಆಳ್ವಿಕೆ ಕೊನೆಗೊಂಡಿತ್ತು. ಆ ಸಂದರ್ಭದಲ್ಲಿ ಮಮತಾ ಕೇಂದ್ರದಲ್ಲಿ ರೈಲ್ವೆ ಸಚಿವರಾಗಿದ್ದರು. ಮುಖ್ಯಮಂತ್ರಿಯಾಗಲು ಅವರು ರಾಜೀನಾಮೆ ನೀಡಿದಾಗ ರೈಲ್ವೆ ಖಾತೆ ಮುಕುಲ್ ಹೆಗಲೇರಿತ್ತು. ಆದರೆ ಅದೇ ವರ್ಷ ಸಚಿವ ಸಂಪುಟ ಪುನಾರಚನೆಯಾದಾಗ ಮುಕುಲ್ ಹೊರಬಿದ್ದರು. ಬಳಿಕ 2012ರ ಮಾರ್ಚ್ 12ರಂದು ಮತ್ತೆ ರೈಲ್ವೆ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಅದೇ ವರ್ಷ ಸೆಪ್ಟೆಂಬರ್ 21ರ ತನಕ ಮುಂದುವರಿದರು. ಈ ಅವಧಿಯಲ್ಲಿ ಅವರು ಪಕ್ಷದ ಪ್ರಭಾವಿ ಮುಖವಾಗಿ ದೆಹಲಿಯಲ್ಲೂ ಕಾಣಿಸಿಕೊಂಡರು. ಪಕ್ಷ ಸಂಘಟನೆಯ ಜತೆಗೆ ಪ್ರತಿ ಚುನಾವಣೆ ಸಂದರ್ಭದಲ್ಲಿ ಪಕ್ಷದ ಸಂಪೂರ್ಣ ಚುನಾವಣಾ ತಂತ್ರಗಾರಿಕೆಯ ಯೋಜನೆ ಮತ್ತು ಅನುಷ್ಠಾನವನ್ನು ಸ್ವತಃ ಮುಕುಲ್ ಮಾಡುತ್ತಿದ್ದರು ಎಂದು ಪಕ್ಷದ ಹಿರಿಯ ನಾಯಕರು ಸ್ಮರಿಸಿಕೊಳ್ಳುತ್ತಾರೆ. ಆ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಇಡೀ ದೇಶಾದ್ಯಂತ ‘ಮೋದಿ ಅಲೆ‘ ವ್ಯಾಪಿಸಿತ್ತು. ನರೇಂದ್ರ ಮೋದಿ- ಅಮಿತ್ ಷಾ ಮೋಡಿ ಪಶ್ಚಿಮ ಬಂಗಾಳದಲ್ಲೂ ನಡೆಯುವುದೇ ಎಂಬ ಕುತೂಹಲ ಗರಿಗೆದರಿತ್ತು. ಆದರೆ, ಅಂದು ಈ ರಾಜ್ಯದಲ್ಲಿ ನಡೆದುದು ಮಮತಾ ಬ್ಯಾನರ್ಜಿ-ಮುಕುಲ್ ರಾಯ್ ಮೋಡಿ. ಮುಕುಲ್ ತೃಣಮೂಲ ಭವನದಲ್ಲಿ ಕುಳಿತುಕೊಂಡೇ ರಾಜ್ಯದ 42 ಲೋಕಸಭಾ ಸ್ಥಾನಗಳಲ್ಲಿನ ಚುನಾವಣಾ ತಂತ್ರಗಾರಿಕೆ ರೂಪಿಸಿಕೊಂಡು ಅನುಷ್ಠಾನಗೊಳಿಸಿದ್ದರು. ಪರಿಣಾಮ, ಬಿಜೆಪಿಗೆ ಎರಡು ಸ್ಥಾನವಷ್ಟೇ ದಕ್ಕಿತು. 34ರಲ್ಲಿ ಟಿಎಂಸಿ ಗೆಲುವು ಕಂಡಿತು. ಇಲ್ಲಿತನಕ ಎಲ್ಲವೂ ಸರಿಯಾಗೇ ಇತ್ತು. ಗುಜರಾತ್​ನಲ್ಲಿ ಮೋದಿ-ಅಮಿತ್ ಷಾ ಜೋಡಿಯಂತೆ ಪಶ್ಚಿಮ ಬಂಗಾಳದಲ್ಲಿ ಮಮತಾ -ಮುಕುಲ್ ರಾಯ್ ಜೋಡಿ ರಾಜಕಾರಣದ ಹಲವು ಪಟ್ಟುಗಳನ್ನು ಮುಂದಿಟ್ಟುಕೊಂಡು ಪ್ರಬಲವಾಗಿ ಬೆಳೆಯುವ ಎಲ್ಲ ಲಕ್ಷಣಗಳೂ ಗೋಚರಿಸಿದ್ದವು. ಆದರೆ, ಯಾವಾಗ ಶಾರದ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿ ಸಿಬಿಐ ಮುಕುಲ್ ರಾಯ್ ಅವರನ್ನು ಗಂಟೆಗಟ್ಟಲೆ ಪ್ರಶ್ನಿಸಿತೋ, ಅಲ್ಲಿಂದ ಈ ಜೋಡಿ ನಡುವೆ ಬಿರುಕು ಕಾಣಿಸಿತು. ನಂತರ ನಾರದ ಸ್ಟಿಂಗ್ ಪ್ರಕರಣದಲ್ಲೂ ರಾಯ್ ಹೆಸರು ಕೇಳಿತು. ಅಲ್ಲಿಗೆ ಮುಕುಲ್ ಪಕ್ಷದೊಳಗೆ ಮೂಲೆಗುಂಪಾಗತೊಡಗಿದರು. 2015ರ ಹೊತ್ತಿಗೆ ಅವರು ಬೇರೆ ಪಕ್ಷ ಕಟ್ಟುತ್ತಾರೆ ಎಂಬ ಮಾತು ಕೇಳಿಬಂತಾದರೂ ಅದು ಈಡೇರಿರಲಿಲ್ಲ. ಆದರೆ, ಆ ವರ್ಷ ಮಮತಾ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಮುಕುಲ್​ರನ್ನು ಕಿತ್ತುಹಾಕಿದ್ದರು. ಆದರೆ, ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮರುವರ್ಷವೇ ಅವರಿಗೆ ಪ್ರಾಮುಖ್ಯ ನೀಡಿ ಪಕ್ಷದಲ್ಲಿ ಅದುವರೆಗೆ ಇಲ್ಲದೇ ಇದ್ದ ಉಪಾಧ್ಯಕ್ಷ ಸ್ಥಾನವನ್ನು ಸೃಷ್ಟಿಸಿ ಅವರನ್ನು ಅದಕ್ಕೆ ನೇಮಕ ಮಾಡಿ ರಾಜಕೀಯ ಜಾಣ್ಮೆ ತೋರಿದರು ಮಮತಾ. ಇದು ಕೆಲಸ ಮಾಡಿತು ಕೂಡ. ಮುಕುಲ್ ತಂತ್ರಗಾರಿಕೆಯ ಪರಿಣಾಮ, ವಿಧಾನಸಭೆಯ 250 ಸ್ಥಾನಗಳ ಪೈಕಿ ಟಿಎಂಸಿ 211ರಲ್ಲಿ ಗೆಲುವು ಕಂಡಿತು.

ಇಂಥ ತಂತ್ರಗಾರನ ವೈಯಕ್ತಿಕ ಬದುಕಿನತ್ತ ನೋಡಿದರೆ ತಂದೆ ರೈಲ್ವೆ ಉದ್ಯೋಗಿಯಾಗಿದ್ದವರು. ಪಶ್ಚಿಮ ಬಂಗಾಳದ ನಾರ್ತ್ 24 ಪರಗಣಾಸ್​ನ ಕಾಂಚ್ರಪಾರದ ನಿವಾಸಿ. 1954 ಏ.17ರಂದು ಜನನ. ಸ್ಥಳೀಯ ಹರ್ನೀತ್ ಹೈಸ್ಕೂಲ್​ನಲ್ಲಿ ಶಿಕ್ಷಣ ಪಡೆದ ಮುಕುಲ್, ಯಾವಾಗಲೂ ಟಾಪ್ ಫೈವ್​ನಲ್ಲೇ ಕಾಣಿಸುತ್ತಿದ್ದರು. ನೈಹಟಿಯ ರಿಷಿ ಬಂಕಿಮ್ ಚಂದ್ರ ಕಾಲೇಜಿನಲ್ಲಿ ರಸಾಯನಶಾಸ್ತ್ರದಲ್ಲಿ ಉನ್ನತ ಶಿಕ್ಷಣ ಪಡೆದರು. ಕಾಲೇಜು ದಿನಗಳಲ್ಲೇ ರಾಜಕೀಯದ ಬಗ್ಗೆ ಆಸಕ್ತರಾಗಿದ್ದರು ಎಂದು ಅವರ ಅಕ್ಕ ಅನುಪಮ ಸೇನ್​ಗುಪ್ತ ಹೇಳಿದ್ದನ್ನು ಮಾಧ್ಯಮಗಳು ಉಲ್ಲೇಖಿಸಿವೆ. ಮುಕುಲ್ ಪುತ್ರ ಸುಭ್ರಾಂಶು ರಾಯ್ ಕೂಡ ಟಿಎಂಸಿಯಲ್ಲಿದ್ದು, ಕಳೆದ ಎರಡು ಅವಧಿಯಿಂದ ನಾರ್ತ್ 24 ಪರಗಣಾಸ್​ನ ಬಿಜ್​ಪುರ್ ಕ್ಷೇತ್ರದ ಶಾಸಕ. ಅವರು ಇತ್ತೀಚಿನ ಬೆಳವಣಿಗೆ ಹಿನ್ನೆಲೆಯಲ್ಲಿ ತಾನು ಪಕ್ಷ ತ್ಯಜಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈಗ ಉಚ್ಚಾಟನೆ ಪ್ರಕ್ರಿಯೆ ಗಮನಿಸಿದಾಗ ಇದರ ಹಿಂದಿನ ಮಮತಾ ‘ಸ್ವಚ್ಛ ಇಮೇಜ್‘ ಕಾಯ್ದುಕೊಳ್ಳಲು ಹವಣಿಸುತ್ತಿರುವುದು ಕಣ್ಣಿಗೆ ರಾಚುತ್ತದೆ. ಪ್ರಮುಖವಾಗಿ, ಸಿಬಿಐ ವಿಚಾರಣೆ ಎದುರಾದಾಗ ಮುಕುಲ್ ರಾಯ್ ನಿಲುವು, ಮಮತಾರದ್ದಕ್ಕಿಂತ ಭಿನ್ನವಾಗಿತ್ತು. ಸಿಬಿಐ ವಿಚಾರಣೆ ಕೇಂದ್ರ ಸರ್ಕಾರದ ಷಡ್ಯಂತ್ರ ಎಂದು ಹೇಳಿದ್ದರೆ, ಮುಕುಲ್ ವಿಚಾರಣೆ ಎದುರಿಸುವುದಾಗಿ ಹೇಳಿಕೆ ನೀಡಿದರು. ಹೀಗೆ ಉಂಟಾದ ಭಿನ್ನಾಭಿಪ್ರಾಯ ಇದೀಗ ಮುಕುಲ್​ರನ್ನು ಪಕ್ಷದಿಂದ ಉಚ್ಚಾಟನೆಗೊಳಿಸುವ ಮಟ್ಟಕ್ಕೆ ಬೆಳೆಯಿತು. ಈಗ ಅವರು ಬಿಜೆಪಿ ಸೇರುವ ವಿಚಾರ ಚರ್ಚೆಯಲ್ಲಿದೆ. ಆದಾಗ್ಯೂ, ಅವರು ಬಿಜೆಪಿ ಸೇರಿದರೂ ಬಿಟ್ಟರೂ 2019ರ ಲೋಕಸಭೆ ಚುನಾವಣೆ ಮತ್ತು 2021ರ ವಿಧಾನಸಭೆ ಚುನಾವಣೆಗಳು ಮುಕುಲ್ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿವೆ.

ಜೇಟ್ಲಿಗೆ ಜಟಿಲ ಸವಾಲು

ಕಳೆದ ಹತ್ತು ಹದಿನೈದು ದಿನಗಳಿಂದೀಚೆಗೆ ದೇಶದ ‘ಅರ್ಥ ವ್ಯವಸ್ಥೆ’ ಎಲ್ಲರ ಗಮನಸೆಳೆಯುತ್ತಿದೆ. ಅಧಿಕ ಮೌಲ್ಯದ ನೋಟು ಅಮಾನ್ಯಗೊಳಿಸಿದಾಗ, ಡಿಜಿಟಲ್ ವಹಿವಾಟಿಗೆ ಉತ್ತೇಜನ ನೀಡಿದಾಗ, ಒಂದು ದೇಶ ಒಂದು ತೆರಿಗೆ ವ್ಯವಸ್ಥೆಯ ‘ಜಿಎಸ್​ಟಿ’ ಜಾರಿಗೆ ತರುವ ಸಂದರ್ಭದಲ್ಲಿ ವ್ಯಕ್ತವಾಗದಷ್ಟು ಟೀಕೆ, ಟ್ರೋಲ್​ಗಳು ಈಗ ಸಾಮಾಜಿಕ ತಾಣಗಳಲ್ಲಿ ಹರಿದಾಡತೊಡಗಿವೆ. ಅರ್ಥ ಸಚಿವ ಅರುಣ್ ಜೇಟ್ಲಿಯವರ ಸಾಮರ್ಥ್ಯ ಸ್ವಪಕ್ಷೀಯರಿಂದಲೇ ಪ್ರಶ್ನೆಗೊಳಗಾಗಿದೆ. ವಿಪಕ್ಷದವರ ಟೀಕೆಗಳಿಗೆ ಬಲ ತುಂಬುವಂತಹ ಬೆಳವಣಿಗೆ ಇದಾಗಿ ಪರಿಣಮಿಸಿತು. ಇಂತಹ ಸನ್ನಿವೇಶದಲ್ಲಿ ಸಹಜವಾಗಿಯೇ ತಾವು ತೆಗೆದುಕೊಂಡ ಸುಧಾರಣಾ ಕ್ರಮಗಳನ್ನು ಜೇಟ್ಲಿಯವರು ಸಮರ್ಥಿಸಬೇಕಾಯಿತು ಮತ್ತು ಅದು ಕೊಡಬಲ್ಲ ನಿರೀಕ್ಷಿತ ಫಲಿತಾಂಶಗಳ ಬಗ್ಗೆ ವಿಶ್ವಾಸವನ್ನು ಜನರಲ್ಲಿ ತುಂಬುವ ಕೆಲಸಕ್ಕೆ ಮುಂದಾಗಬೇಕಾಯಿತು. ಜಾಗತೀಕರಣ, ಉದಾರೀಕರಣಕ್ಕೆ ತೆರೆದುಕೊಂಡು ದಶಕಗಳಾದರೂ ಬದಲಾಗದೇ ಜಡಭರತನಂತಿದ್ದ ಅರ್ಥ ವ್ಯವಸ್ಥೆಗೆ ಹೊಸ ರೂಪು ಕೊಡುವ ಬಹುದೊಡ್ಡ ಸವಾಲನ್ನು ಸ್ವೀಕರಿಸಿದ ಅರುಣ್ ಜೇಟ್ಲಿಯವರ ಆರ್ಥಿಕ ನೀತಿ, ಕೆಲಸ ಕಾರ್ಯ, ಸಾಮರ್ಥ್ಯ ಹಾಗೂ ದೇಶದ ಅರ್ಥ ವ್ಯವಸ್ಥೆಯ ಅವಲೋಕನಕ್ಕೆ ಈ ಸನ್ನಿವೇಶ ಒಂದು ನಿಮಿತ್ತವೂ ಆಗಿದೆ.

ಬ್ರಿಟಿಷ್ ಆಳ್ವಿಕೆಯಿಂದ ಸ್ವತಂತ್ರವಾದ ಸಂದರ್ಭದ ಅರ್ಥ ವ್ಯವಸ್ಥೆ, 1990ರ ದಶಕದವರೆಗೂ ಮುಂದುವರಿಯಿತು. ಒಂದಷ್ಟು ಅಭಿವೃದ್ಧಿ ಕೆಲಸಗಳು, ಜನಪ್ರಿಯ ಯೋಜನೆಗಳೂ ಜಾರಿಗೊಂಡವು. ಜಾಗತೀಕರಣ, ಉದಾರೀಕರಣವನ್ನು ಇಡೀ ಜಗತ್ತು ಅಪ್ಪಿಕೊಂಡಾಗ, ಭಾರತವನ್ನೂ ಅದು ತನ್ನ ತೆಕ್ಕೆಗೆ ಎಳೆದುಕೊಂಡಿತು. ಇದು 1990ರ ದಶಕದ ಆರಂಭ ಕಾಲಘಟ್ಟದ ಮಾತು. ಅಂದು ಕಾಂಗ್ರೆಸ್​ನ ಪಿ.ವಿ.ನರಸಿಂಹರಾವ್ ಸರ್ಕಾರವಿತ್ತು. ಡಾ. ಮನಮೋಹನ್ ಸಿಂಗ್ ಅರ್ಥ ಸಚಿವರಾಗಿ ದೇಶದ ಅರ್ಥ ವ್ಯವಸ್ಥೆಯನ್ನು ಜಗತ್ತಿಗೆ ತೆರೆದರು. ವಿದೇಶಿ ಹೂಡಿಕೆ ಪ್ರಮಾಣ ಹೆಚ್ಚಾಯಿತು. ವಿದೇಶಿ ಕಂಪನಿಗಳು ಭಾರತವೆಂಬ ಬಳಕೆದಾರರ ಮಾರುಕಟ್ಟೆಯನ್ನು ಪ್ರವೇಶಿಸಿದವು. ಅನೇಕ ದೇಶೀಯ ಕಂಪನಿಗಳು ಸ್ಪರ್ಧೆ ಎದುರಿಸಲಾರದೆ ಮುಚ್ಚಿ ಹೋದವು. ಇನ್ನೊಂದಷ್ಟು ಕಂಪನಿಗಳು ವಿದೇಶಗಳಿಗೂ ತಮ್ಮ ವಹಿವಾಟು ವಿಸ್ತರಿಸಿದವು. ಇಷ್ಟಾದರೂ, ದೇಶದ ಅರ್ಥ ವ್ಯವಸ್ಥೆಗೊಂದು ಹೊಸ ರೂಪ ಬರಲಿಲ್ಲ. ಶತಮಾನಗಳಷ್ಟು ಹಳೆಯ ಕಾನೂನು, ಅಲ್ಪಸ್ವಲ್ಪ ತಿದ್ದುಪಡಿ, ಪರಿಷ್ಕರಣೆಗಳ ಮೂಲಕ ಚಾಲ್ತಿಯಲ್ಲಿತ್ತು. ಕೇಂದ್ರದಲ್ಲಿ ಹಲವು ಸರ್ಕಾರಗಳು ಬದಲಾದವು. ನರಸಿಂಹರಾವ್ ಸಂಪುಟದಲ್ಲಿ ವಿತ್ತ ಸಚಿವರಾಗಿದ್ದ ಮನಮೋಹನ್ ಸಿಂಗ್ ದಶಕದ ಬಳಿಕ ಎರಡು ಅವಧಿಗೆ ಪ್ರಧಾನಮಂತ್ರಿಯಾದರು. ಈ ಅವಧಿಯಲ್ಲೂ ಜಾಗತೀಕರಣ, ಉದಾರೀಕರಣದ ಪ್ರಭಾವ, ಪರಿಣಾಮ ಎದುರಿಸುವುದಕ್ಕಾಗಿ ದೇಶದ ಅರ್ಥ ವ್ಯವಸ್ಥೆಗೆ ಅಲ್ಲಲ್ಲಿ ತೇಪೆ ಹಚ್ಚುವ ಕೆಲಸ ನಡೆಯಿತೇ ವಿನಾ, ಸಮಗ್ರ ಬದಲಾವಣೆಯ ಪ್ರಯತ್ನ ಚಿಂತನೆ ಮಟ್ಟಕ್ಕೆ ಸೀಮಿತವಾಯಿತು. ರಾಜಕೀಯ ಐಕ್ಯತೆ ಇರಲಿಲ್ಲ, ಮೈತ್ರಿ ಸರ್ಕಾರ ಇದ್ದ ಕಾರಣ ಅಧಿಕಾರಕ್ಕೆ ಅಂಟಿಕೊಳ್ಳುವ ಸಹಜಗುಣದಿಂದಾಗಿ ಅಂತಹ ಪ್ರಯತ್ನಕ್ಕೆ ಹಿನ್ನಡೆಯಾಯಿತು ಎಂಬುದೂ ಸಕಾರಣ ವಾದೀತು. ಇದರ ಪರಿಣಾಮ ದೇಶದ ಅರ್ಥ ವ್ಯವಸ್ಥೆ, ಜಿಡಿಪಿ ಬೆಳವಣಿಗೆಗಳ ಮೇಲೂ ಆಯಿತು.

2014ರಲ್ಲಿ ಸಾರ್ವತ್ರಿಕ ಚುನಾವಣೆ ನಡೆದಾಗ, ಮೋದಿ ಅಲೆ ಎದ್ದ ಪರಿಣಾಮ ಬಿಜೆಪಿಗೆ ಲೋಕಸಭೆಯಲ್ಲಿ ಸ್ಪಷ್ಟ ಬಹುಮತ ಲಭಿಸಿತು. ಚುನಾವಣೆಗೂ ಮೊದಲೇ ಲಭ್ಯವಿದ್ದ ಸುಳಿವಿನಂತೆ ಪಂಜಾಬಿನ ಅಮೃತಸರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತರೂ, ರಾಜ್ಯಸಭೆ ಸದಸ್ಯರಾಗಿ ವಿತ್ತ ಖಾತೆ ಹೊಣೆಗಾರಿಕೆ ಜೇಟ್ಲಿ ಪಾಲಾಯಿತು. ಅವರ ಬುದ್ಧಿವಂತಿಕೆ, ಹಣಕಾಸು ವಿಚಾರದಲ್ಲಿನ ಪರಿಣತಿಯೇ ಇಂತಹ ಜವಾಬ್ದಾರಿ ಅವರಿಗೊಲಿಯುವಂತೆ ಮಾಡಿತು. ಪ್ರಧಾನಿ ನರೇಂದ್ರ ಮೋದಿಯವರಿಗೂ ಅವರ ಬಗ್ಗೆ ಇನ್ನಿಲ್ಲದ ವಿಶ್ವಾಸ. ಸ್ಪಷ್ಟ ಬಹುಮತ ಲಭ್ಯವಿರುವ ಕಾರಣ, ಮೋದಿಯವರು ಹೇಳಿದಂತೆ ಪಕ್ಷದ ಹಿತಕ್ಕಿಂತ ದೇಶದ ಹಿತಕ್ಕೆ ಮೊದಲ ಮಣೆ ಎಂಬ ನೀತಿಯನ್ನು ಪ್ರತಿಪಾದಿಸುತ್ತಿದ್ದಾರೆ. ಅದಕ್ಕೆ ತಕ್ಕ ಕಾರ್ಯ ಯೋಜನೆಗಳನ್ನೂ ರೂಪಿಸಿ ಅನುಷ್ಠಾನಗೊಳಿಸುತ್ತಿದ್ದಾರೆ. ಪರಿಣಾಮವೇ ದೇಶದ ಅರ್ಥ ವ್ಯವಸ್ಥೆಗೆ ಹೊಸ ರೂಪುಕೊಡುವ ಕಾರ್ಯ ಯೋಜನೆಗಳು. ಕಳೆದ ವರ್ಷದ ಕೊನೆಯ ತನಕವೂ ತ್ವರಿತವಾಗಿ ಅಭಿವೃದ್ಧಿ ಹೊಂದುತ್ತಿರುವ ಅರ್ಥ ವ್ಯವಸ್ಥೆ ಎಂದೇ ಬಿಂಬಿಸಲ್ಪಟ್ಟಿದ್ದ ಭಾರತ, ಏಳೆಂಟು ತಿಂಗಳ ಅವಧಿಯಲ್ಲಿ ಆ ಪಟ್ಟಿಯಿಂದ ಹೊರಬಿತ್ತು. ಕಾರಣ, ದೇಶದ ಅರ್ಥ ವ್ಯವಸ್ಥೆ ಸುಧಾರಿಸಲು ಸರ್ಕಾರ ತೆಗೆದುಕೊಂಡ ಕಠಿಣ ನಿಲುವುಗಳು. ಪರ್ಯಾಯ ಅರ್ಥ ವ್ಯವಸ್ಥೆಯಂತಿದ್ದ ಕಾಳಧನ ವ್ಯವಸ್ಥೆಗೆ ಕೊಡಲಿ ಏಟು ನೀಡುವಂತಹ 500, 1,000 ರೂ. ಮುಖಬೆಲೆಯ ಹಳೇ ನೋಟುಗಳ ಅಮಾನ್ಯ, ಡಿಜಿಟಲ್ ವಹಿವಾಟಿಗೆ ಉತ್ತೇಜನದಿಂದಾಗಿ ನಗದು ವಹಿವಾಟು ಇಳಿಮುಖವಾಯಿತು. ಹೊಸ ನೋಟುಗಳನ್ನು ಚಲಾವಣೆಗೆ ತಂದ ಬೆನ್ನಲ್ಲೇ, ಕಾಳಧನಿಕರು, ತೆರಿಗೆ ವಂಚಕರ ಮುಖವಾಡ ಕಳಚಿತು. 130 ಕೋಟಿ ಜನಸಂಖ್ಯೆ ಇದ್ದರೂ, ಆದಾಯ ತೆರಿಗೆ ಪಾವತಿದಾರರಾಗಿದ್ದವರು, ದೊಡ್ಡ ದೊಡ್ಡ ಉದ್ಯಮಿಗಳು ಮತ್ತು ತಿಂಗಳ ವೇತನ ಬ್ಯಾಂಕಿಗೆ ಜಮಾ ಆಗುತ್ತಿದ್ದವರಷ್ಟೇ. 2015-16ರ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ 3.7 ಕೋಟಿ ತೆರಿಗೆದಾರರ ಪೈಕಿ 99 ಲಕ್ಷ ಮಂದಿ ಹೊಸಬರು. ಹಲವು ರಾಜ್ಯಗಳಲ್ಲಿ ವಿಧಿಸಲಾಗುತ್ತಿದ್ದ ಹಲವು ತೆರಿಗೆಗಳ ಬದಲು ಇಡೀ ದೇಶಕ್ಕೆ ಒಂದೇ ತೆರಿಗೆ ಎಂಬ ‘ಸರಕು ಮತ್ತು ಸೇವಾ ತೆರಿಗೆ’(ಜಿಎಸ್​ಟಿ) ವ್ಯವಸ್ಥೆ ಜುಲೈ 1ರಂದು ಜಾರಿಗೆ ಬಂತು. ಇದು ದೇಶದ ತೆರಿಗೆ ವ್ಯವಸ್ಥೆಯ ಚಿತ್ರಣವನ್ನೇ ಬದಲಾಯಿಸಿತು. ವಾಣಿಜ್ಯ ತೆರಿಗೆ ಸೇರಿ ಹಲವು ತೆರಿಗೆಗಳು ರದ್ದುಗೊಂಡವು. ರಾಜ್ಯ, ಕೇಂದ್ರ, ಅಂತಾರಾಜ್ಯಗಳಿಗೆ ಅನ್ವಯವಾಗುವ ತೆರಿಗೆ ಸಂಗ್ರಹ-ಹಂಚಿಕೆ ವ್ಯವಸ್ಥೆ ಜಾರಿಗೆ ಬಂತು. ಈ ವ್ಯವಸ್ಥೆಗೆ ಇನ್ನೂ ತೆರಿಗೆದಾರರು ಒಗ್ಗಿಕೊಂಡಿಲ್ಲ. ಲೋಪದೋಷಗಳನ್ನು ಗುರುತಿಸಿಕೊಂಡು ಅದನ್ನು ಪರಿಷ್ಕರಿಸುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ ಎಂಬುದಕ್ಕೆ ಶುಕ್ರವಾರ ಅದು 27 ಸರಕುಗಳ ಮೇಲಿನ ಕರಭಾರ ಇಳಿಸಿದ್ದು ನಿದರ್ಶನ.

ಏತನ್ಮಧ್ಯೆ, ಚಂದ್ರಶೇಖರ್ ಸಂಪುಟ ಹಾಗೂ ವಾಜಪೇಯಿ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ಬಿಜೆಪಿಯ ಹಿರಿಯ ನಾಯಕ ಯಶವಂತ ಸಿನ್ಹಾ ಸೆ.28ರಂದು ಲೇಖನವೊಂದರಲ್ಲಿ ಅರುಣ್ ಜೇಟ್ಲಿಯವರನ್ನು ನೇರಾನೇರ ಟೀಕಿಸಿ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಜೇಟ್ಲಿಯವರು ಇದಕ್ಕೆ ‘80ರ ವಯೋಮಾನದ ಉದ್ಯೋಗಾರ್ಥಿ’ ಎಂದು ಕಟುವಾಗಿ ಟೀಕಿಸಿದ್ದರು. ಇದಾಗಿ ಎರಡು ದಿನಗಳ ಬಳಿಕ, ಇದುವರೆಗಿನ ಎಲ್ಲ ಪ್ರಧಾನಿಗಳು ತನ್ನ ಮಾತು ಆಲಿಸುತ್ತಿದ್ದರು, ಮೋದಿಯವರು ತನ್ನನ್ನು ಹತ್ತಿರಕ್ಕೂ ಸುಳಿಯಲು ಬಿಡುತ್ತಿಲ್ಲ ಎಂದು ಸಿನ್ಹಾ ಅಸಮಾಧಾನದ ನಿಜಕಾರಣವನ್ನು ಹೊರಹಾಕಿದ್ದರು. ಇದಕ್ಕೆ ಉತ್ತರವಾಗಿ ಅವರ ಪುತ್ರ ಜಯಂತ್ ಸಿನ್ಹಾ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು. ಈಗ ಜಿಡಿಪಿ ಬೆಳವಣಿಗೆ ದರದ ನಿರೀಕ್ಷೆ 7.4ರಿಂದ 6.7ಕ್ಕೆ ಕುಸಿದಿರುವುದು ನಿಜವಾದರೂ, ಜಾಗತಿಕ ಆರ್ಥಿಕ ಫೋರಂ, ಐಎಂಎಫ್​ನಂಥ ಸಂಸ್ಥೆಗಳು ಈ ಬೆಳವಣಿಗೆ ಕುಸಿತ ತಾತ್ಕಾಲಿಕ ಎಂಬುದನ್ನು ಸಾರಿವೆ. ಇವೆಲ್ಲ ಏನೇ ಇರಲಿ, ಅನುಭವ ವೇದ್ಯ ವಿಚಾರಗಳತ್ತ ಗಮನಹರಿಸೋಣ. ವಿಶೇಷವಾಗಿ ಡಿಜಿಟಲ್ ವಹಿವಾಟು ನಡೆಸುವಂತೆ ವ್ಯವಸ್ಥೆಯಲ್ಲಿ ಬದಲಾವಣೆ ತಂದಾಗ, ‘ಹೇಗೋ ನಗದು ವಹಿವಾಟು ನಡೆಸಿ ತೆರಿಗೆ ಪಾವತಿಸೋದನ್ನು ತಪ್ಪಿಸ್ತಿದ್ದೆವು. ಇನ್ನು ತೆರಿಗೆ ತಪ್ಪಿಸೋದು ಹೇಗಪ್ಪಾ?’ ಎಂಬ ಮಾತು ಕೇಳತೊಡಗಿದೆ. ನಗದು ಹಣ ಶೇಖರಣೆಯಾಗಿ ಕಾಳಧನವಾಗಿ ವ್ಯವಹಾರಕ್ಕೀಡಾಗುವ ಪ್ರಮಾಣ ಕಡಿಮೆಯಾಗಿದೆ. ಆದರೆ, ಪೂರ್ಣ ನಿಂತಿಲ್ಲ ಎಂಬುದನ್ನೂ ಒಪ್ಪಿಕೊಳ್ಳಬೇಕು. ಇಂತಹ ಸನ್ನಿವೇಶದೊಂದಿಗೆ, ಒಟ್ಟಾರೆ ಅರ್ಥ ವ್ಯವಸ್ಥೆಗೆ ಹೊಸ ರೂಪ ಕೊಡುವ ಸವಾಲನ್ನು ಜೇಟ್ಲಿ ಹೇಗೆ ನಿರ್ವಹಿಸುತ್ತಾರೆ ಎಂಬುದೂ ಸದ್ಯದ ಕುತೂಹಲ.