ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಮುಕುಟವಾಗುವರೇ ?

ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಘಟನಾತ್ಮಕ ವಿಚಾರಗಳಿಂದಾಗಿ ಇತ್ತೀಚೆಗೆ ಬಹಳ ಸುದ್ದಿಯಲ್ಲಿದೆ. ಬಹುಕೋಟಿ ರೂಪಾಯಿ ಮೌಲ್ಯದ ಶಾರದಾ ಚಿಟ್​ಫಂಡ್ ಹಗರಣ ಬೆಳಕಿಗೆ ಬಂದ ನಂತರದಲ್ಲಿ ಟಿಎಂಸಿಯೊಳಗೆ ತಲ್ಲಣ ಆರಂಭವಾಗಿದೆ. ಇದರ ಬೆನ್ನಲ್ಲೇ ಪಕ್ಷದ ಸ್ಥಾಪಕ ಸದಸ್ಯರೊಳಗೇ ಕಂಡುಬಂದ ಬಿರುಕು ಇದೀಗ ನಂ.2 ಸ್ಥಾನದಲ್ಲಿದ್ದ ಮುಕುಲ್ ರಾಯ್(63) ಉಚ್ಚಾಟನೆಯೊಂದಿಗೆ ಕಂದಕ ವಾಗಿ ಮಾರ್ಪಟ್ಟಿದೆ. ಪಕ್ಷದ ಚುನಾವಣಾ ತಂತ್ರಗಾರರಾಗಿದ್ದ ಮುಕುಲ್ ರಾಯ್ ಅವರ ಮುಂದಿನ ನಡೆಯ ಬಗ್ಗೆ ಮೂಡಿರುವ ಕುತೂಹಲದ ಕಾರಣದಿಂದ ಅವರೀಗ ಸುದ್ದಿಯ ಕೇಂದ್ರ ಬಿಂದು.

1946DACತೃಣಮೂಲ ಕಾಂಗ್ರೆಸ್ ಎಂದರೆ ಮಮತಾ ಬ್ಯಾನರ್ಜಿ ಎಂಬ ಇಮೇಜ್ ಇದೆಯಾದರೂ, ರಾಜಕೀಯ ಮತ್ತು ಚುನಾವಣಾ ತಂತ್ರಗಾರಿಕೆಯ ವಿಷಯಕ್ಕೆ ಬಂದಾಗ ಬಿಜೆಪಿಯಲ್ಲಿ ಅಮಿತ್ ಷಾಗೆ ಎಷ್ಟು ಪ್ರಾಮುಖ್ಯತೆ ಇದೆಯೋ ಅಷ್ಟೇ ಪ್ರಾಮುಖ್ಯ ಟಿಎಂಸಿನಲ್ಲಿ ಮುಕುಲ್ ರಾಯ್ಗೆ ಇತ್ತು. ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ನಂತರದ ಸ್ಥಾನ ಮುಕುಲ್​ದೇ ಆಗಿತ್ತು, ಅಷ್ಟರ ಮಟ್ಟಿನ ಪ್ರಭಾವಿಯಾಗಿದ್ದರು. ಅದು ತೊಂಭತ್ತರ ದಶಕದ ಮಾತು. ಮುಕುಲ್ ರಾಯ್ ಆಗಿನ್ನೂ ಪೂರ್ಣ ಪ್ರಮಾಣದ ರಾಜಕಾರಣಕ್ಕೆ ಇಳಿದಿರಲಿಲ್ಲ. ವಿದ್ಯುತ್ ಸಾಮಗ್ರಿಗಳನ್ನು ಪೂರೈಸುತ್ತಿದ್ದ ವ್ಯಾಪಾರಿಯಾಗಿದ್ದರು. ಯುವ ಕಾಂಗ್ರೆಸ್​ನಲ್ಲಿದ್ದ ಮಮತಾ ಬ್ಯಾನರ್ಜಿ ಪರಿಚಯವಾಗಿದ್ದರು. ಹಾಗೆ ಅವರ ಪ್ರಭಾವಕ್ಕೆ ಒಳಗಾದ ಮುಕುಲ್ ನಿಧಾನವಾಗಿ ರಾಜಕೀಯದತ್ತ ವಾಲಿದರು. ಬಳಿಕ ಮಮತಾ ಯುವ ಕಾಂಗ್ರೆಸ್ ಅಧ್ಯಕ್ಷರಾದಾಗ ಅವರ ನಾಯಕತ್ವದಡಿ ಬಂಗಾಳದಲ್ಲಿ ಕೆಲಸ ಮಾಡಿದರು. 1997ರಲ್ಲಿ ಕಾಂಗ್ರೆಸ್ ತ್ಯಜಿಸುವುದಕ್ಕೆ ಮಮತಾ ನಿರ್ಧರಿಸಿದಾಗ ಅವರ ಬೆನ್ನಿಗೆ ನಿಂತವರು ಈ ಮುಕುಲ್. ಅದೇ ವರ್ಷ ಡಿಸೆಂಬರ್ 17ರಂದು ತೃಣಮೂಲ ಕಾಂಗ್ರೆಸ್ ಪಕ್ಷ ಸ್ಥಾಪಿಸಿದಾಗ ಅದರ ದಾಖಲೆಗಳಿಗೆ ಮೊದಲ ಸಹಿ ಮಮತಾರದ್ದು ಬಿದ್ದರೆ, ಎರಡನೇ ಸಹಿ ಮುಕುಲ್ ಅವರದ್ದೇ ಇತ್ತು. ಹೀಗಾಗಿ ಅವರು ಅಂದಿನಿಂದಲೂ ನಂ.2 ಎಂದೇ ಪಕ್ಷದಲ್ಲಿ ಬಿಂಬಿಸಲ್ಪಟ್ಟವರು. ಪಕ್ಷ ಸಂಘಟನೆಗೆ ಅವರಿಗೆ ನಿಜವಾದ ಅವಕಾಶ ಒದಗಿಸಿದ್ದು, ನಂದಿಗ್ರಾಮ ಮತ್ತು ಸಿಂಗೂರು ಪ್ರತಿಭಟನೆಗಳು. ಈ ಸಂದರ್ಭದಲ್ಲಿ ಮಮತಾರ ಜತೆಗೆ ನಿಂತವರು ಇದೇ ಮುಕುಲ್. 2006ರ ಏಪ್ರಿಲ್​ನಲ್ಲಿ ರಾಜ್ಯಸಭೆಗೆ ಆಯ್ಕೆಯಾದ ಅವರು, ಮುಂದೆ ಸಂಸತ್ತಿನ ಹಲವು ಸಮಿತಿಗಳ ಸದಸ್ಯರಾದರು. 2008ರ ಏಪ್ರಿಲ್​ನಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದರು. 2009ರಲ್ಲಿ ಯುಪಿಎ ಸರ್ಕಾರದಲ್ಲಿ ಅವರು ಹಡಗು ಸಾರಿಗೆ ಖಾತೆಯ ರಾಜ್ಯ ಸಚಿವರಾದರು. 2011ರಲ್ಲಿ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷದ ಚುನಾವಣಾ ತಂತ್ರಗಾರಿಕೆಯ ಹೊಣೆ ಮುಕುಲ್ ರಾಯ್ ಹೆಗಲೇರಿತ್ತು. ಅಂದು ಸನ್ನಿವೇಶ ಹೇಗಿತ್ತು ಎಂದರೆ, ಮಮತಾ ಬ್ಯಾನರ್ಜಿ ಕ್ರೌಡ್ ಪುಲ್ಲರ್ ಆಗಿ ನಾಯಕಿಯ ಕೆಲಸ ಮಾಡುತ್ತಿದ್ದರೆ, ಪಕ್ಷದ ಚುನಾವಣಾ ತಂತ್ರಗಾರರಾಗಿ ಮುಕುಲ್ ರಾಯ್ ಮತಪರಿವರ್ತಕರಾಗಿ ಕೆಲಸಮಾಡಿದರು. ಪರಿಣಾಮ, ಪಶ್ಚಿಮ ಬಂಗಾಳದಲ್ಲಿ 34 ವರ್ಷಗಳ ಎಡರಂಗ ಆಳ್ವಿಕೆ ಕೊನೆಗೊಂಡಿತ್ತು. ಆ ಸಂದರ್ಭದಲ್ಲಿ ಮಮತಾ ಕೇಂದ್ರದಲ್ಲಿ ರೈಲ್ವೆ ಸಚಿವರಾಗಿದ್ದರು. ಮುಖ್ಯಮಂತ್ರಿಯಾಗಲು ಅವರು ರಾಜೀನಾಮೆ ನೀಡಿದಾಗ ರೈಲ್ವೆ ಖಾತೆ ಮುಕುಲ್ ಹೆಗಲೇರಿತ್ತು. ಆದರೆ ಅದೇ ವರ್ಷ ಸಚಿವ ಸಂಪುಟ ಪುನಾರಚನೆಯಾದಾಗ ಮುಕುಲ್ ಹೊರಬಿದ್ದರು. ಬಳಿಕ 2012ರ ಮಾರ್ಚ್ 12ರಂದು ಮತ್ತೆ ರೈಲ್ವೆ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಅದೇ ವರ್ಷ ಸೆಪ್ಟೆಂಬರ್ 21ರ ತನಕ ಮುಂದುವರಿದರು. ಈ ಅವಧಿಯಲ್ಲಿ ಅವರು ಪಕ್ಷದ ಪ್ರಭಾವಿ ಮುಖವಾಗಿ ದೆಹಲಿಯಲ್ಲೂ ಕಾಣಿಸಿಕೊಂಡರು. ಪಕ್ಷ ಸಂಘಟನೆಯ ಜತೆಗೆ ಪ್ರತಿ ಚುನಾವಣೆ ಸಂದರ್ಭದಲ್ಲಿ ಪಕ್ಷದ ಸಂಪೂರ್ಣ ಚುನಾವಣಾ ತಂತ್ರಗಾರಿಕೆಯ ಯೋಜನೆ ಮತ್ತು ಅನುಷ್ಠಾನವನ್ನು ಸ್ವತಃ ಮುಕುಲ್ ಮಾಡುತ್ತಿದ್ದರು ಎಂದು ಪಕ್ಷದ ಹಿರಿಯ ನಾಯಕರು ಸ್ಮರಿಸಿಕೊಳ್ಳುತ್ತಾರೆ. ಆ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಇಡೀ ದೇಶಾದ್ಯಂತ ‘ಮೋದಿ ಅಲೆ‘ ವ್ಯಾಪಿಸಿತ್ತು. ನರೇಂದ್ರ ಮೋದಿ- ಅಮಿತ್ ಷಾ ಮೋಡಿ ಪಶ್ಚಿಮ ಬಂಗಾಳದಲ್ಲೂ ನಡೆಯುವುದೇ ಎಂಬ ಕುತೂಹಲ ಗರಿಗೆದರಿತ್ತು. ಆದರೆ, ಅಂದು ಈ ರಾಜ್ಯದಲ್ಲಿ ನಡೆದುದು ಮಮತಾ ಬ್ಯಾನರ್ಜಿ-ಮುಕುಲ್ ರಾಯ್ ಮೋಡಿ. ಮುಕುಲ್ ತೃಣಮೂಲ ಭವನದಲ್ಲಿ ಕುಳಿತುಕೊಂಡೇ ರಾಜ್ಯದ 42 ಲೋಕಸಭಾ ಸ್ಥಾನಗಳಲ್ಲಿನ ಚುನಾವಣಾ ತಂತ್ರಗಾರಿಕೆ ರೂಪಿಸಿಕೊಂಡು ಅನುಷ್ಠಾನಗೊಳಿಸಿದ್ದರು. ಪರಿಣಾಮ, ಬಿಜೆಪಿಗೆ ಎರಡು ಸ್ಥಾನವಷ್ಟೇ ದಕ್ಕಿತು. 34ರಲ್ಲಿ ಟಿಎಂಸಿ ಗೆಲುವು ಕಂಡಿತು. ಇಲ್ಲಿತನಕ ಎಲ್ಲವೂ ಸರಿಯಾಗೇ ಇತ್ತು. ಗುಜರಾತ್​ನಲ್ಲಿ ಮೋದಿ-ಅಮಿತ್ ಷಾ ಜೋಡಿಯಂತೆ ಪಶ್ಚಿಮ ಬಂಗಾಳದಲ್ಲಿ ಮಮತಾ -ಮುಕುಲ್ ರಾಯ್ ಜೋಡಿ ರಾಜಕಾರಣದ ಹಲವು ಪಟ್ಟುಗಳನ್ನು ಮುಂದಿಟ್ಟುಕೊಂಡು ಪ್ರಬಲವಾಗಿ ಬೆಳೆಯುವ ಎಲ್ಲ ಲಕ್ಷಣಗಳೂ ಗೋಚರಿಸಿದ್ದವು. ಆದರೆ, ಯಾವಾಗ ಶಾರದ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿ ಸಿಬಿಐ ಮುಕುಲ್ ರಾಯ್ ಅವರನ್ನು ಗಂಟೆಗಟ್ಟಲೆ ಪ್ರಶ್ನಿಸಿತೋ, ಅಲ್ಲಿಂದ ಈ ಜೋಡಿ ನಡುವೆ ಬಿರುಕು ಕಾಣಿಸಿತು. ನಂತರ ನಾರದ ಸ್ಟಿಂಗ್ ಪ್ರಕರಣದಲ್ಲೂ ರಾಯ್ ಹೆಸರು ಕೇಳಿತು. ಅಲ್ಲಿಗೆ ಮುಕುಲ್ ಪಕ್ಷದೊಳಗೆ ಮೂಲೆಗುಂಪಾಗತೊಡಗಿದರು. 2015ರ ಹೊತ್ತಿಗೆ ಅವರು ಬೇರೆ ಪಕ್ಷ ಕಟ್ಟುತ್ತಾರೆ ಎಂಬ ಮಾತು ಕೇಳಿಬಂತಾದರೂ ಅದು ಈಡೇರಿರಲಿಲ್ಲ. ಆದರೆ, ಆ ವರ್ಷ ಮಮತಾ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಮುಕುಲ್​ರನ್ನು ಕಿತ್ತುಹಾಕಿದ್ದರು. ಆದರೆ, ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮರುವರ್ಷವೇ ಅವರಿಗೆ ಪ್ರಾಮುಖ್ಯ ನೀಡಿ ಪಕ್ಷದಲ್ಲಿ ಅದುವರೆಗೆ ಇಲ್ಲದೇ ಇದ್ದ ಉಪಾಧ್ಯಕ್ಷ ಸ್ಥಾನವನ್ನು ಸೃಷ್ಟಿಸಿ ಅವರನ್ನು ಅದಕ್ಕೆ ನೇಮಕ ಮಾಡಿ ರಾಜಕೀಯ ಜಾಣ್ಮೆ ತೋರಿದರು ಮಮತಾ. ಇದು ಕೆಲಸ ಮಾಡಿತು ಕೂಡ. ಮುಕುಲ್ ತಂತ್ರಗಾರಿಕೆಯ ಪರಿಣಾಮ, ವಿಧಾನಸಭೆಯ 250 ಸ್ಥಾನಗಳ ಪೈಕಿ ಟಿಎಂಸಿ 211ರಲ್ಲಿ ಗೆಲುವು ಕಂಡಿತು.

ಇಂಥ ತಂತ್ರಗಾರನ ವೈಯಕ್ತಿಕ ಬದುಕಿನತ್ತ ನೋಡಿದರೆ ತಂದೆ ರೈಲ್ವೆ ಉದ್ಯೋಗಿಯಾಗಿದ್ದವರು. ಪಶ್ಚಿಮ ಬಂಗಾಳದ ನಾರ್ತ್ 24 ಪರಗಣಾಸ್​ನ ಕಾಂಚ್ರಪಾರದ ನಿವಾಸಿ. 1954 ಏ.17ರಂದು ಜನನ. ಸ್ಥಳೀಯ ಹರ್ನೀತ್ ಹೈಸ್ಕೂಲ್​ನಲ್ಲಿ ಶಿಕ್ಷಣ ಪಡೆದ ಮುಕುಲ್, ಯಾವಾಗಲೂ ಟಾಪ್ ಫೈವ್​ನಲ್ಲೇ ಕಾಣಿಸುತ್ತಿದ್ದರು. ನೈಹಟಿಯ ರಿಷಿ ಬಂಕಿಮ್ ಚಂದ್ರ ಕಾಲೇಜಿನಲ್ಲಿ ರಸಾಯನಶಾಸ್ತ್ರದಲ್ಲಿ ಉನ್ನತ ಶಿಕ್ಷಣ ಪಡೆದರು. ಕಾಲೇಜು ದಿನಗಳಲ್ಲೇ ರಾಜಕೀಯದ ಬಗ್ಗೆ ಆಸಕ್ತರಾಗಿದ್ದರು ಎಂದು ಅವರ ಅಕ್ಕ ಅನುಪಮ ಸೇನ್​ಗುಪ್ತ ಹೇಳಿದ್ದನ್ನು ಮಾಧ್ಯಮಗಳು ಉಲ್ಲೇಖಿಸಿವೆ. ಮುಕುಲ್ ಪುತ್ರ ಸುಭ್ರಾಂಶು ರಾಯ್ ಕೂಡ ಟಿಎಂಸಿಯಲ್ಲಿದ್ದು, ಕಳೆದ ಎರಡು ಅವಧಿಯಿಂದ ನಾರ್ತ್ 24 ಪರಗಣಾಸ್​ನ ಬಿಜ್​ಪುರ್ ಕ್ಷೇತ್ರದ ಶಾಸಕ. ಅವರು ಇತ್ತೀಚಿನ ಬೆಳವಣಿಗೆ ಹಿನ್ನೆಲೆಯಲ್ಲಿ ತಾನು ಪಕ್ಷ ತ್ಯಜಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈಗ ಉಚ್ಚಾಟನೆ ಪ್ರಕ್ರಿಯೆ ಗಮನಿಸಿದಾಗ ಇದರ ಹಿಂದಿನ ಮಮತಾ ‘ಸ್ವಚ್ಛ ಇಮೇಜ್‘ ಕಾಯ್ದುಕೊಳ್ಳಲು ಹವಣಿಸುತ್ತಿರುವುದು ಕಣ್ಣಿಗೆ ರಾಚುತ್ತದೆ. ಪ್ರಮುಖವಾಗಿ, ಸಿಬಿಐ ವಿಚಾರಣೆ ಎದುರಾದಾಗ ಮುಕುಲ್ ರಾಯ್ ನಿಲುವು, ಮಮತಾರದ್ದಕ್ಕಿಂತ ಭಿನ್ನವಾಗಿತ್ತು. ಸಿಬಿಐ ವಿಚಾರಣೆ ಕೇಂದ್ರ ಸರ್ಕಾರದ ಷಡ್ಯಂತ್ರ ಎಂದು ಹೇಳಿದ್ದರೆ, ಮುಕುಲ್ ವಿಚಾರಣೆ ಎದುರಿಸುವುದಾಗಿ ಹೇಳಿಕೆ ನೀಡಿದರು. ಹೀಗೆ ಉಂಟಾದ ಭಿನ್ನಾಭಿಪ್ರಾಯ ಇದೀಗ ಮುಕುಲ್​ರನ್ನು ಪಕ್ಷದಿಂದ ಉಚ್ಚಾಟನೆಗೊಳಿಸುವ ಮಟ್ಟಕ್ಕೆ ಬೆಳೆಯಿತು. ಈಗ ಅವರು ಬಿಜೆಪಿ ಸೇರುವ ವಿಚಾರ ಚರ್ಚೆಯಲ್ಲಿದೆ. ಆದಾಗ್ಯೂ, ಅವರು ಬಿಜೆಪಿ ಸೇರಿದರೂ ಬಿಟ್ಟರೂ 2019ರ ಲೋಕಸಭೆ ಚುನಾವಣೆ ಮತ್ತು 2021ರ ವಿಧಾನಸಭೆ ಚುನಾವಣೆಗಳು ಮುಕುಲ್ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿವೆ.

Advertisements

ಜೇಟ್ಲಿಗೆ ಜಟಿಲ ಸವಾಲು

ಕಳೆದ ಹತ್ತು ಹದಿನೈದು ದಿನಗಳಿಂದೀಚೆಗೆ ದೇಶದ ‘ಅರ್ಥ ವ್ಯವಸ್ಥೆ’ ಎಲ್ಲರ ಗಮನಸೆಳೆಯುತ್ತಿದೆ. ಅಧಿಕ ಮೌಲ್ಯದ ನೋಟು ಅಮಾನ್ಯಗೊಳಿಸಿದಾಗ, ಡಿಜಿಟಲ್ ವಹಿವಾಟಿಗೆ ಉತ್ತೇಜನ ನೀಡಿದಾಗ, ಒಂದು ದೇಶ ಒಂದು ತೆರಿಗೆ ವ್ಯವಸ್ಥೆಯ ‘ಜಿಎಸ್​ಟಿ’ ಜಾರಿಗೆ ತರುವ ಸಂದರ್ಭದಲ್ಲಿ ವ್ಯಕ್ತವಾಗದಷ್ಟು ಟೀಕೆ, ಟ್ರೋಲ್​ಗಳು ಈಗ ಸಾಮಾಜಿಕ ತಾಣಗಳಲ್ಲಿ ಹರಿದಾಡತೊಡಗಿವೆ. ಅರ್ಥ ಸಚಿವ ಅರುಣ್ ಜೇಟ್ಲಿಯವರ ಸಾಮರ್ಥ್ಯ ಸ್ವಪಕ್ಷೀಯರಿಂದಲೇ ಪ್ರಶ್ನೆಗೊಳಗಾಗಿದೆ. ವಿಪಕ್ಷದವರ ಟೀಕೆಗಳಿಗೆ ಬಲ ತುಂಬುವಂತಹ ಬೆಳವಣಿಗೆ ಇದಾಗಿ ಪರಿಣಮಿಸಿತು. ಇಂತಹ ಸನ್ನಿವೇಶದಲ್ಲಿ ಸಹಜವಾಗಿಯೇ ತಾವು ತೆಗೆದುಕೊಂಡ ಸುಧಾರಣಾ ಕ್ರಮಗಳನ್ನು ಜೇಟ್ಲಿಯವರು ಸಮರ್ಥಿಸಬೇಕಾಯಿತು ಮತ್ತು ಅದು ಕೊಡಬಲ್ಲ ನಿರೀಕ್ಷಿತ ಫಲಿತಾಂಶಗಳ ಬಗ್ಗೆ ವಿಶ್ವಾಸವನ್ನು ಜನರಲ್ಲಿ ತುಂಬುವ ಕೆಲಸಕ್ಕೆ ಮುಂದಾಗಬೇಕಾಯಿತು. ಜಾಗತೀಕರಣ, ಉದಾರೀಕರಣಕ್ಕೆ ತೆರೆದುಕೊಂಡು ದಶಕಗಳಾದರೂ ಬದಲಾಗದೇ ಜಡಭರತನಂತಿದ್ದ ಅರ್ಥ ವ್ಯವಸ್ಥೆಗೆ ಹೊಸ ರೂಪು ಕೊಡುವ ಬಹುದೊಡ್ಡ ಸವಾಲನ್ನು ಸ್ವೀಕರಿಸಿದ ಅರುಣ್ ಜೇಟ್ಲಿಯವರ ಆರ್ಥಿಕ ನೀತಿ, ಕೆಲಸ ಕಾರ್ಯ, ಸಾಮರ್ಥ್ಯ ಹಾಗೂ ದೇಶದ ಅರ್ಥ ವ್ಯವಸ್ಥೆಯ ಅವಲೋಕನಕ್ಕೆ ಈ ಸನ್ನಿವೇಶ ಒಂದು ನಿಮಿತ್ತವೂ ಆಗಿದೆ.

ಬ್ರಿಟಿಷ್ ಆಳ್ವಿಕೆಯಿಂದ ಸ್ವತಂತ್ರವಾದ ಸಂದರ್ಭದ ಅರ್ಥ ವ್ಯವಸ್ಥೆ, 1990ರ ದಶಕದವರೆಗೂ ಮುಂದುವರಿಯಿತು. ಒಂದಷ್ಟು ಅಭಿವೃದ್ಧಿ ಕೆಲಸಗಳು, ಜನಪ್ರಿಯ ಯೋಜನೆಗಳೂ ಜಾರಿಗೊಂಡವು. ಜಾಗತೀಕರಣ, ಉದಾರೀಕರಣವನ್ನು ಇಡೀ ಜಗತ್ತು ಅಪ್ಪಿಕೊಂಡಾಗ, ಭಾರತವನ್ನೂ ಅದು ತನ್ನ ತೆಕ್ಕೆಗೆ ಎಳೆದುಕೊಂಡಿತು. ಇದು 1990ರ ದಶಕದ ಆರಂಭ ಕಾಲಘಟ್ಟದ ಮಾತು. ಅಂದು ಕಾಂಗ್ರೆಸ್​ನ ಪಿ.ವಿ.ನರಸಿಂಹರಾವ್ ಸರ್ಕಾರವಿತ್ತು. ಡಾ. ಮನಮೋಹನ್ ಸಿಂಗ್ ಅರ್ಥ ಸಚಿವರಾಗಿ ದೇಶದ ಅರ್ಥ ವ್ಯವಸ್ಥೆಯನ್ನು ಜಗತ್ತಿಗೆ ತೆರೆದರು. ವಿದೇಶಿ ಹೂಡಿಕೆ ಪ್ರಮಾಣ ಹೆಚ್ಚಾಯಿತು. ವಿದೇಶಿ ಕಂಪನಿಗಳು ಭಾರತವೆಂಬ ಬಳಕೆದಾರರ ಮಾರುಕಟ್ಟೆಯನ್ನು ಪ್ರವೇಶಿಸಿದವು. ಅನೇಕ ದೇಶೀಯ ಕಂಪನಿಗಳು ಸ್ಪರ್ಧೆ ಎದುರಿಸಲಾರದೆ ಮುಚ್ಚಿ ಹೋದವು. ಇನ್ನೊಂದಷ್ಟು ಕಂಪನಿಗಳು ವಿದೇಶಗಳಿಗೂ ತಮ್ಮ ವಹಿವಾಟು ವಿಸ್ತರಿಸಿದವು. ಇಷ್ಟಾದರೂ, ದೇಶದ ಅರ್ಥ ವ್ಯವಸ್ಥೆಗೊಂದು ಹೊಸ ರೂಪ ಬರಲಿಲ್ಲ. ಶತಮಾನಗಳಷ್ಟು ಹಳೆಯ ಕಾನೂನು, ಅಲ್ಪಸ್ವಲ್ಪ ತಿದ್ದುಪಡಿ, ಪರಿಷ್ಕರಣೆಗಳ ಮೂಲಕ ಚಾಲ್ತಿಯಲ್ಲಿತ್ತು. ಕೇಂದ್ರದಲ್ಲಿ ಹಲವು ಸರ್ಕಾರಗಳು ಬದಲಾದವು. ನರಸಿಂಹರಾವ್ ಸಂಪುಟದಲ್ಲಿ ವಿತ್ತ ಸಚಿವರಾಗಿದ್ದ ಮನಮೋಹನ್ ಸಿಂಗ್ ದಶಕದ ಬಳಿಕ ಎರಡು ಅವಧಿಗೆ ಪ್ರಧಾನಮಂತ್ರಿಯಾದರು. ಈ ಅವಧಿಯಲ್ಲೂ ಜಾಗತೀಕರಣ, ಉದಾರೀಕರಣದ ಪ್ರಭಾವ, ಪರಿಣಾಮ ಎದುರಿಸುವುದಕ್ಕಾಗಿ ದೇಶದ ಅರ್ಥ ವ್ಯವಸ್ಥೆಗೆ ಅಲ್ಲಲ್ಲಿ ತೇಪೆ ಹಚ್ಚುವ ಕೆಲಸ ನಡೆಯಿತೇ ವಿನಾ, ಸಮಗ್ರ ಬದಲಾವಣೆಯ ಪ್ರಯತ್ನ ಚಿಂತನೆ ಮಟ್ಟಕ್ಕೆ ಸೀಮಿತವಾಯಿತು. ರಾಜಕೀಯ ಐಕ್ಯತೆ ಇರಲಿಲ್ಲ, ಮೈತ್ರಿ ಸರ್ಕಾರ ಇದ್ದ ಕಾರಣ ಅಧಿಕಾರಕ್ಕೆ ಅಂಟಿಕೊಳ್ಳುವ ಸಹಜಗುಣದಿಂದಾಗಿ ಅಂತಹ ಪ್ರಯತ್ನಕ್ಕೆ ಹಿನ್ನಡೆಯಾಯಿತು ಎಂಬುದೂ ಸಕಾರಣ ವಾದೀತು. ಇದರ ಪರಿಣಾಮ ದೇಶದ ಅರ್ಥ ವ್ಯವಸ್ಥೆ, ಜಿಡಿಪಿ ಬೆಳವಣಿಗೆಗಳ ಮೇಲೂ ಆಯಿತು.

2014ರಲ್ಲಿ ಸಾರ್ವತ್ರಿಕ ಚುನಾವಣೆ ನಡೆದಾಗ, ಮೋದಿ ಅಲೆ ಎದ್ದ ಪರಿಣಾಮ ಬಿಜೆಪಿಗೆ ಲೋಕಸಭೆಯಲ್ಲಿ ಸ್ಪಷ್ಟ ಬಹುಮತ ಲಭಿಸಿತು. ಚುನಾವಣೆಗೂ ಮೊದಲೇ ಲಭ್ಯವಿದ್ದ ಸುಳಿವಿನಂತೆ ಪಂಜಾಬಿನ ಅಮೃತಸರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತರೂ, ರಾಜ್ಯಸಭೆ ಸದಸ್ಯರಾಗಿ ವಿತ್ತ ಖಾತೆ ಹೊಣೆಗಾರಿಕೆ ಜೇಟ್ಲಿ ಪಾಲಾಯಿತು. ಅವರ ಬುದ್ಧಿವಂತಿಕೆ, ಹಣಕಾಸು ವಿಚಾರದಲ್ಲಿನ ಪರಿಣತಿಯೇ ಇಂತಹ ಜವಾಬ್ದಾರಿ ಅವರಿಗೊಲಿಯುವಂತೆ ಮಾಡಿತು. ಪ್ರಧಾನಿ ನರೇಂದ್ರ ಮೋದಿಯವರಿಗೂ ಅವರ ಬಗ್ಗೆ ಇನ್ನಿಲ್ಲದ ವಿಶ್ವಾಸ. ಸ್ಪಷ್ಟ ಬಹುಮತ ಲಭ್ಯವಿರುವ ಕಾರಣ, ಮೋದಿಯವರು ಹೇಳಿದಂತೆ ಪಕ್ಷದ ಹಿತಕ್ಕಿಂತ ದೇಶದ ಹಿತಕ್ಕೆ ಮೊದಲ ಮಣೆ ಎಂಬ ನೀತಿಯನ್ನು ಪ್ರತಿಪಾದಿಸುತ್ತಿದ್ದಾರೆ. ಅದಕ್ಕೆ ತಕ್ಕ ಕಾರ್ಯ ಯೋಜನೆಗಳನ್ನೂ ರೂಪಿಸಿ ಅನುಷ್ಠಾನಗೊಳಿಸುತ್ತಿದ್ದಾರೆ. ಪರಿಣಾಮವೇ ದೇಶದ ಅರ್ಥ ವ್ಯವಸ್ಥೆಗೆ ಹೊಸ ರೂಪುಕೊಡುವ ಕಾರ್ಯ ಯೋಜನೆಗಳು. ಕಳೆದ ವರ್ಷದ ಕೊನೆಯ ತನಕವೂ ತ್ವರಿತವಾಗಿ ಅಭಿವೃದ್ಧಿ ಹೊಂದುತ್ತಿರುವ ಅರ್ಥ ವ್ಯವಸ್ಥೆ ಎಂದೇ ಬಿಂಬಿಸಲ್ಪಟ್ಟಿದ್ದ ಭಾರತ, ಏಳೆಂಟು ತಿಂಗಳ ಅವಧಿಯಲ್ಲಿ ಆ ಪಟ್ಟಿಯಿಂದ ಹೊರಬಿತ್ತು. ಕಾರಣ, ದೇಶದ ಅರ್ಥ ವ್ಯವಸ್ಥೆ ಸುಧಾರಿಸಲು ಸರ್ಕಾರ ತೆಗೆದುಕೊಂಡ ಕಠಿಣ ನಿಲುವುಗಳು. ಪರ್ಯಾಯ ಅರ್ಥ ವ್ಯವಸ್ಥೆಯಂತಿದ್ದ ಕಾಳಧನ ವ್ಯವಸ್ಥೆಗೆ ಕೊಡಲಿ ಏಟು ನೀಡುವಂತಹ 500, 1,000 ರೂ. ಮುಖಬೆಲೆಯ ಹಳೇ ನೋಟುಗಳ ಅಮಾನ್ಯ, ಡಿಜಿಟಲ್ ವಹಿವಾಟಿಗೆ ಉತ್ತೇಜನದಿಂದಾಗಿ ನಗದು ವಹಿವಾಟು ಇಳಿಮುಖವಾಯಿತು. ಹೊಸ ನೋಟುಗಳನ್ನು ಚಲಾವಣೆಗೆ ತಂದ ಬೆನ್ನಲ್ಲೇ, ಕಾಳಧನಿಕರು, ತೆರಿಗೆ ವಂಚಕರ ಮುಖವಾಡ ಕಳಚಿತು. 130 ಕೋಟಿ ಜನಸಂಖ್ಯೆ ಇದ್ದರೂ, ಆದಾಯ ತೆರಿಗೆ ಪಾವತಿದಾರರಾಗಿದ್ದವರು, ದೊಡ್ಡ ದೊಡ್ಡ ಉದ್ಯಮಿಗಳು ಮತ್ತು ತಿಂಗಳ ವೇತನ ಬ್ಯಾಂಕಿಗೆ ಜಮಾ ಆಗುತ್ತಿದ್ದವರಷ್ಟೇ. 2015-16ರ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ 3.7 ಕೋಟಿ ತೆರಿಗೆದಾರರ ಪೈಕಿ 99 ಲಕ್ಷ ಮಂದಿ ಹೊಸಬರು. ಹಲವು ರಾಜ್ಯಗಳಲ್ಲಿ ವಿಧಿಸಲಾಗುತ್ತಿದ್ದ ಹಲವು ತೆರಿಗೆಗಳ ಬದಲು ಇಡೀ ದೇಶಕ್ಕೆ ಒಂದೇ ತೆರಿಗೆ ಎಂಬ ‘ಸರಕು ಮತ್ತು ಸೇವಾ ತೆರಿಗೆ’(ಜಿಎಸ್​ಟಿ) ವ್ಯವಸ್ಥೆ ಜುಲೈ 1ರಂದು ಜಾರಿಗೆ ಬಂತು. ಇದು ದೇಶದ ತೆರಿಗೆ ವ್ಯವಸ್ಥೆಯ ಚಿತ್ರಣವನ್ನೇ ಬದಲಾಯಿಸಿತು. ವಾಣಿಜ್ಯ ತೆರಿಗೆ ಸೇರಿ ಹಲವು ತೆರಿಗೆಗಳು ರದ್ದುಗೊಂಡವು. ರಾಜ್ಯ, ಕೇಂದ್ರ, ಅಂತಾರಾಜ್ಯಗಳಿಗೆ ಅನ್ವಯವಾಗುವ ತೆರಿಗೆ ಸಂಗ್ರಹ-ಹಂಚಿಕೆ ವ್ಯವಸ್ಥೆ ಜಾರಿಗೆ ಬಂತು. ಈ ವ್ಯವಸ್ಥೆಗೆ ಇನ್ನೂ ತೆರಿಗೆದಾರರು ಒಗ್ಗಿಕೊಂಡಿಲ್ಲ. ಲೋಪದೋಷಗಳನ್ನು ಗುರುತಿಸಿಕೊಂಡು ಅದನ್ನು ಪರಿಷ್ಕರಿಸುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ ಎಂಬುದಕ್ಕೆ ಶುಕ್ರವಾರ ಅದು 27 ಸರಕುಗಳ ಮೇಲಿನ ಕರಭಾರ ಇಳಿಸಿದ್ದು ನಿದರ್ಶನ.

ಏತನ್ಮಧ್ಯೆ, ಚಂದ್ರಶೇಖರ್ ಸಂಪುಟ ಹಾಗೂ ವಾಜಪೇಯಿ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ಬಿಜೆಪಿಯ ಹಿರಿಯ ನಾಯಕ ಯಶವಂತ ಸಿನ್ಹಾ ಸೆ.28ರಂದು ಲೇಖನವೊಂದರಲ್ಲಿ ಅರುಣ್ ಜೇಟ್ಲಿಯವರನ್ನು ನೇರಾನೇರ ಟೀಕಿಸಿ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಜೇಟ್ಲಿಯವರು ಇದಕ್ಕೆ ‘80ರ ವಯೋಮಾನದ ಉದ್ಯೋಗಾರ್ಥಿ’ ಎಂದು ಕಟುವಾಗಿ ಟೀಕಿಸಿದ್ದರು. ಇದಾಗಿ ಎರಡು ದಿನಗಳ ಬಳಿಕ, ಇದುವರೆಗಿನ ಎಲ್ಲ ಪ್ರಧಾನಿಗಳು ತನ್ನ ಮಾತು ಆಲಿಸುತ್ತಿದ್ದರು, ಮೋದಿಯವರು ತನ್ನನ್ನು ಹತ್ತಿರಕ್ಕೂ ಸುಳಿಯಲು ಬಿಡುತ್ತಿಲ್ಲ ಎಂದು ಸಿನ್ಹಾ ಅಸಮಾಧಾನದ ನಿಜಕಾರಣವನ್ನು ಹೊರಹಾಕಿದ್ದರು. ಇದಕ್ಕೆ ಉತ್ತರವಾಗಿ ಅವರ ಪುತ್ರ ಜಯಂತ್ ಸಿನ್ಹಾ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು. ಈಗ ಜಿಡಿಪಿ ಬೆಳವಣಿಗೆ ದರದ ನಿರೀಕ್ಷೆ 7.4ರಿಂದ 6.7ಕ್ಕೆ ಕುಸಿದಿರುವುದು ನಿಜವಾದರೂ, ಜಾಗತಿಕ ಆರ್ಥಿಕ ಫೋರಂ, ಐಎಂಎಫ್​ನಂಥ ಸಂಸ್ಥೆಗಳು ಈ ಬೆಳವಣಿಗೆ ಕುಸಿತ ತಾತ್ಕಾಲಿಕ ಎಂಬುದನ್ನು ಸಾರಿವೆ. ಇವೆಲ್ಲ ಏನೇ ಇರಲಿ, ಅನುಭವ ವೇದ್ಯ ವಿಚಾರಗಳತ್ತ ಗಮನಹರಿಸೋಣ. ವಿಶೇಷವಾಗಿ ಡಿಜಿಟಲ್ ವಹಿವಾಟು ನಡೆಸುವಂತೆ ವ್ಯವಸ್ಥೆಯಲ್ಲಿ ಬದಲಾವಣೆ ತಂದಾಗ, ‘ಹೇಗೋ ನಗದು ವಹಿವಾಟು ನಡೆಸಿ ತೆರಿಗೆ ಪಾವತಿಸೋದನ್ನು ತಪ್ಪಿಸ್ತಿದ್ದೆವು. ಇನ್ನು ತೆರಿಗೆ ತಪ್ಪಿಸೋದು ಹೇಗಪ್ಪಾ?’ ಎಂಬ ಮಾತು ಕೇಳತೊಡಗಿದೆ. ನಗದು ಹಣ ಶೇಖರಣೆಯಾಗಿ ಕಾಳಧನವಾಗಿ ವ್ಯವಹಾರಕ್ಕೀಡಾಗುವ ಪ್ರಮಾಣ ಕಡಿಮೆಯಾಗಿದೆ. ಆದರೆ, ಪೂರ್ಣ ನಿಂತಿಲ್ಲ ಎಂಬುದನ್ನೂ ಒಪ್ಪಿಕೊಳ್ಳಬೇಕು. ಇಂತಹ ಸನ್ನಿವೇಶದೊಂದಿಗೆ, ಒಟ್ಟಾರೆ ಅರ್ಥ ವ್ಯವಸ್ಥೆಗೆ ಹೊಸ ರೂಪ ಕೊಡುವ ಸವಾಲನ್ನು ಜೇಟ್ಲಿ ಹೇಗೆ ನಿರ್ವಹಿಸುತ್ತಾರೆ ಎಂಬುದೂ ಸದ್ಯದ ಕುತೂಹಲ.

ಶರೀರ ರಷ್ಯನ್ ಹೃದಯ ಹಿಂದುಸ್ಥಾನಿ

`ಹಣ ನಗದೀಕರಿಸುವುದಕ್ಕೆ ಮಿತಿ ಹೇರಿದ ಭಾರತ ಸರ್ಕಾರದ ನಿರ್ಧಾರದಿಂದಾಗಿ ಒಂದೊಳ್ಳೆ ರೆಸ್ಟೋರೆಂಟ್‍ನಿಂದ ರಾತ್ರಿ ಊಟ 29-jan-2017ತರಿಸುವುದಕ್ಕೂ ಆಗದ ಸ್ಥಿತಿ ನಿರ್ಮಾಣವಾಗಿದೆ’ ಎಂದು ರಷ್ಯನ್ ರಾಯಭಾರಿ ಟೀಕಿಸಿದ ಸುದ್ದಿಯೊಂದು ಕಳೆದ ಡಿಸೆಂಬರ್ 6ರಂದು ಸುದ್ದಿಮಾಧ್ಯಮಗಳಲ್ಲಿ ಗಮನಸೆಳೆದಿದ್ದು ನಿಮಗೆ ನೆನಪಿರಬಹುದು. ಅವರು ಬೇರಾರೂ ಅಲ್ಲ, ಕಳೆದ ಗುರುವಾರ (ಜ.26) ವಿಧಿವಶರಾದ ಅಲೆಕ್ಸಾಂಡರ್ ಕಡಕಿನ್.
ಅಧಿಕ ಮೌಲ್ಯದ ನೋಟುಗಳನ್ನು ರದ್ದುಗೊಳಿಸಿದ ನ.8ರ ತೀರ್ಮಾನವನ್ನು ಟೀಕಿಸಿ ಡಿಸೆಂಬರ್ 2ರಂದು ವಿದೇಶಾಂಗ ಸಚಿವಾಲಯಕ್ಕೆ ಅವರು ಪತ್ರ ಬರೆದಿದ್ದರು. ಆ ಪತ್ರದ ಸಾರಾಂಶವೇ ಡಿಸೆಂಬರ್ 6ರಂದು ಸುದ್ದಿಮಾಧ್ಯಮಗಳಲ್ಲಿ ಪ್ರಸಾರವಾದದ್ದು. ಹಾಗೆಂದು ಅವರು ಭಾರತ-ವಿರೋಧಿಯೇನೂ ಅಲ್ಲ. ಭಾರತಕ್ಕೆ ಆಗಮಿಸಿದ ವಿದೇಶಿ ರಾಜತಾಂತ್ರಿಕ ಅಧಿಕಾರಿಗಳ ಪೈಕಿ ಭಿನ್ನಸ್ತರದಲ್ಲಿ ಗುರುತಿಸಲ್ಪಡುವವರು ಅಲೆಕ್ಸಾಂಡರ್. ಮೊನ್ನೆ ನಡೆದ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಹಿರಿಯ ರಾಜತಾಂತ್ರಿಕ ಅಧಿಕಾರಿ ಎಂಬ ನೆಲೆಯಲ್ಲಿ ಅವರು ಪಾಲ್ಗೊಳ್ಳಬೇಕಿತ್ತು. ಆದರೆ, ಅದೇ ದಿನ ಬೆಳಗ್ಗೆ ದಿಢೀರ್ ಹೃದಯಾಘಾತವಾದ ಹಿನ್ನೆಲೆಯಲ್ಲಿ ಅವರನ್ನು ನವದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. 67 ವರ್ಷದ ಅವರು ಅಲ್ಲೇ ಕೊನೆಯುಸಿರೆಳೆದರು.
ನವದೆಹಲಿಗೆ 1971ರಲ್ಲಿ ಬಂದಾಗ ಅವರಿಗಿನ್ನೂ 22 ವರ್ಷ ವಯಸ್ಸು. ಪ್ರೊಬೆಷನರಿ ಅಧಿಕಾರಿಯಾಗಿ ನವದೆಹಲಿಯ ರಷ್ಯನ್ ರಾಯಭಾರ ಕಚೇರಿಗೆ ಪ್ರವೇಶ ಪಡೆದ ಅವರು 1972ರಿಂದ 1978ರ ತನಕ ಯುಎಸ್‍ಎಸ್‍ಆರ್‍ನ ರಾಯಭಾರ ಕಚೇರಿಯ ತೃತಿಯ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದರು. ಹಾಗೆ ಆರಂಭವಾದ ಅವರ ರಾಜತಾಂತ್ರಿಕ ಹೊಣೆಗಾರಿಕೆ ಹಂತ ಹಂತವಾಗಿ ಹೆಚ್ಚಳವಾಗಿ 2009ರ ಅ.27ರಿಂದೀಚೆಗೆ ಅವರು ಭಾರತದಲ್ಲೇ ರಷ್ಯನ್ ರಾಯಭಾರಿಯಾಗಿ ಸೇವೆಯಲ್ಲಿದ್ದರು. ಈ ಸುದೀರ್ಘ ಸೇವಾವಧಿಯ ಬಹುಪಾಲು ಭಾರತದಲ್ಲೇ ಆಗಿತ್ತು ಎನ್ನುವುದು ವಿಶೇಷ. ಭಾರತ ಹಾಗೂ ರಷ್ಯಾ ನಡುವಿನ ದ್ವಿಪಕ್ಷೀಯ ಬಾಂಧವ್ಯ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಅಲೆಕ್ಸಾಂಡರ್ ಪ್ರಮುಖ ಪಾತ್ರವಹಿಸಿದ್ದರು. ಇದರ ದ್ಯೋತಕವಾಗಿ 2016ರ ಜುಲೈನಲ್ಲಿ ರಷ್ಯಾ ಅಧ್ಯಕ್ಷರ ಸಿಬ್ಬಂದಿ ಮುಖ್ಯಸ್ಥ ಸರ್ಗೆ ಇವಾನೋವ್ ಅವರು ಅಲೆಕ್ಸಾಂಡರ್‍ಗೆ `ಆರ್ಡರ್ ಆಫ್ ಫ್ರೆಂಡ್‍ಷಿಪ್’ ಪುರಸ್ಕಾರ ನೀಡಿ ಗೌರವಿಸಿದ್ದರು. ಕಳೆದವಾರ ಅಲೆಕ್ಸಾಂಡರ್ ನಿಧನರಾದಾಗ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಕ ಟ್ವೀಟ್ ಮಾಡಿ, `ಅಲೆಕ್ಸಾಂಡರ್ ಅವರ ನಿಧನದಿಂದ ದುಃಖಿತರಾಗಿದ್ದೇವೆ. ಅವರು ಭಾರತದ ಅತ್ಯುತ್ತಮ ಸ್ನೇಹಿತ ಹಾಗೂ ನಿರರ್ಗಳವಾಗಿ ಹಿಂದಿಯಲ್ಲಿ ಮಾತನಾಡಬಲ್ಲ ಪ್ರೀತಿಪಾತ್ರರಾದ ರಾಜತಾಂತ್ರಿಕ ಅಧಿಕಾರಿಯಾಗಿದ್ದರು. ಭಾರತ ಹಾಗೂ ರಷ್ಯಾ ನಡುವಿನ ಬಾಂಧವ್ಯ ಗಟ್ಟಿಗೊಳಿಸುವಲ್ಲಿ ಅವಿಶ್ರಾಂತವಾಗಿ ಶ್ರಮಿಸಿದ್ದರು’ ಎಂದಿದ್ದರು. ಇವೆಲ್ಲವೂ ಅಲೆಕ್ಸಾಂಡರ್ ಹಿರಿಮೆಯನ್ನು ಸಾರುವಂಥವು.
ಅಲೆಕ್ಸಾಂಡರ್ ಯಾಕೆ ಭಿನ್ನರಾಗುತ್ತಾರೆ ಎಂದರೆ, ಅವರು ರಷ್ಯದ ರಾಜತಾಂತ್ರಿಕ ಅಧಿಕಾರಿಯಾಗಿದ್ದರೂ `ಭಾರತೀಯತೆ’ಯನ್ನು ರೂಢಿಸಿಕೊಂಡವರು. 2013ನೇ ಇಸವಿ ಅದು. ದೆಹಲಿಯ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಅವರು, ಈ ದೇಶದ ನೆಲವು ತನ್ನ `ಕರ್ಮಭೂಮಿ’, `ಜ್ಞಾನಭೂಮಿ’ ಮತ್ತು `ಪ್ರೇಮ-ಮೈತ್ರಿ ಭೂಮಿ’ ಅಷ್ಟೇ ಅಲ್ಲ, `ತಪೋಭೂಮಿ’ಯೂ ಹೌದು ಎಂದಿದ್ದರು. ವಿದೇಶಿಯರು ಭಾರತೀಯ ಭಾಷೆಯಲ್ಲಿ ಮಾತನಾಡುವಾಗ ಅವರ ಭಾಷೆಯ ಶೈಲಿ ಬರುವುದು ಸಹಜ. ಆದರೆ, ಅಲೆಕ್ಸಾಂಡರ್ ಹಾಗಿರಲಿಲ್ಲ. ಹಿಂದಿ ಭಾಷೆಯ ತಾಪ ಹಾಗೂ ತಪದ ನಡುವೆ ಸಣ್ಣ ವ್ಯತ್ಯಾಸವಷ್ಟೇ ಇದ್ದು, ಅವುಗಳನ್ನು ಬಳಸುವ ವಿಷಯದಲ್ಲಿ ಬಹಳ ಜಾಣ್ಮೆ ತೋರುತ್ತಿದ್ದರು. ಅವರು ಹಿಂದಿ ಭಾಷೆ ಕಲಿತು, ಸ್ಥಳೀಯ ಸಂವಹನಕ್ಕೆ ಅದನ್ನೇ ಬಳಸುತ್ತಿದ್ದರು. ಇದೊಂದೇ ಅಂಶ ಸಾಕು ಅವರ ರಷ್ಯನ್ ರಾಯಭಾರಿಯಾಗಿದ್ದರೂ, ಹೃದಯದಲ್ಲಿ ಹಿಂದುಸ್ಥಾನಿಯಾಗಿದ್ದರು ಎನ್ನುವುದಕ್ಕೆ!
ಇಷ್ಟಕ್ಕೇ `ಹೃದಯದಲ್ಲಿ ಹಿಂದುಸ್ಥಾನಿ’ ಎಂದಲ್ಲ. ಅವರು ಭಾರತಕ್ಕೆ ಬಂದ ಬಳಿಕ ಹಿಂದಿ ಭಾಷೆ ಕಲಿತು ಅದರಲ್ಲೇ ವ್ಯವಹರಿಸತೊಡಗಿದ ಅವಧಿ, ಆ ವೇಗ ಎಲ್ಲವೂ ಅಚ್ಚರಿಯೇ ಸರಿ. ಐವತ್ತರ ದಶಕದ ಬಾಲಿವುಡ್ ಹಾಡುಗಳನ್ನು ಅದರಲ್ಲೂ ಶಾಸ್ತ್ರೀಯ ಹಾಡುಗಳನ್ನೂ ಅವರು ಹಾಡಬಲ್ಲವರಾಗಿದ್ದರು. ಲಕ್ಷಾಂತರ ಜನ ಗುನುಗುನಿಸುವ `ಸರ್ ಪೇ ಲಾಲ್ ಟೋಪಿ ರಸ್ಸೀ, ಫಿರ್ ಭೀ ದಿಲ್ ಹೇ ಹಿಂದುಸ್ಥಾನಿ’ ಎಂದು ಹಾಡು ಕೇಳಿದಾಗ, ಅಲೆಕ್ಸಾಂಡರ್ ಹೃದಯ ಬೀಗುತ್ತಿತ್ತು. ಎಷ್ಟೋ ಸಲ ದೆಹಲಿಯ ಆಪ್ತವಲಯದಲ್ಲವರು ತಾನು, `ಹಾಫ್ ಇಂಡಿಯನ್’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು ಕೂಡ. ಬಾಲಿವುಡ್ ಸಿನಿಮಾಗಳ ಬಗ್ಗೆ ವಿಪರೀತ ಒಲವು ಹೊಂದಿದ್ದ ಅವರು, ರಾಜ್ ಕಪೂರ್, ಶಶಿಕಪೂರ್ ಸೇರಿ ಹಲವರೊಂದಿಗೆ ನಿಕಟ ಸ್ನೇಹ ಹೊಂದಿದ್ದರು. ರಷ್ಯನ್ ರಾಯಭಾರ ಕಚೇರಿಯಲ್ಲಿ ಸಾಂಪ್ರದಾಯಿಕ ಕ್ರಿಶ್ಚಿಯನ್ ಪಾರ್ಟಿ ನಡೆಯುತ್ತಿದ್ದರೆ ಅಲ್ಲಿ ಅಲೆಕ್ಸಾಂಡರ್ ಅಪ್ಪಟ ಭಾರತೀಯ ಉಡುಗೆ ಶೆರ್ವಾನಿ ಹಾಗೂ ಸಫಾ ಹಾಕಿ ಹಾಜರಿರುತ್ತಿದ್ದರು. ಅಂತಹ ಭಾರತಪ್ರೇಮ ಅವರದ್ದು.
ಸೇವಾವಧಿಯಲ್ಲಿ ಭಾರತದ ಬಹುತೇಕ ಪ್ರಮುಖ ರಾಜಕಾರಣಿಗಳನ್ನು ಅಂದರೆ ಚರಣ್‍ಸಿಂಗ್‍ರಿಂದ ಹಿಡಿದು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿಯವರತನಕ ಬಹುತೇಕ ಎಲ್ಲರನ್ನೂ ಭೇಟಿ ಮಾಡಿದ್ದಾರೆ. ಇವರಲ್ಲಿ ಹೆಚ್ಚಿನವರ ಜತೆಗೆ ಅವರು ಉತ್ತಮ ಬಾಂಧವ್ಯವನ್ನೂ ಹೊಂದಿದ್ದರು ಎನ್ನುತ್ತವೆ ರಾಜತಾಂತ್ರಿಕ ವಲಯದ ಮೂಲಗಳು.
ಇನ್ನು, ರಾಜತಾಂತ್ರಿಕ ಅಧಿಕಾರಿಯಾಗಿ ಅವರು ಯುಎಸ್‍ಎಸ್‍ಆರ್‍ನ ವೈಭವವನ್ನೂ ಕಂಡಿದ್ದಾರೆ, ಅದೇ ರೀತಿ ಚದುರಿಹೋದ ಯುಎಸ್‍ಎಸ್‍ಆರ್, ಆ ನಂತರದಲ್ಲಿ ಉದಯಿಸಿದ ಪುಟ್ಟ ರಷ್ಯಾ, ಅದರ ಬೆಳವಣಿಗೆಗಳನ್ನು ಪ್ರತಿಹಂತದಲ್ಲಿ ನೋಡುತ್ತ ಕೆಲಸ ಮಾಡಿದವರು ಅವರು. 2005ರಿಂದೀಚೆಗೆ ಭಾರತ ಹಾಗೂ ಅಮೆರಿಕ ನಡುವಿನ ಬಾಂಧವ್ಯ ಸುಧಾರಿಸುತ್ತಿದ್ದರೂ, ಭಾರತ ಹಾಗೂ ರಷ್ಯಾ ನಡುವಿನ ಬಾಂಧವ್ಯ ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದವರು ಅಲೆಕ್ಸಾಂಡರ್. ಭಾರತ-ಅಮೆರಿಕ ನಡುವಿನ ಅಣು ಒಪ್ಪಂದ ರೂಪುಗೊಳ್ಳುತ್ತಿರುವಾಗ ಅದರ ಹಿಂದಿರುವ ಕುಟಿಲತೆಯ ಬಗ್ಗೆ ಭಾರತ ಸರ್ಕಾರವನ್ನು ಎಚ್ಚರಿಸಿದ್ದರು ಕೂಡ. ಕೂಡಂಕೂಳಂ ಅಣುಶಕ್ತಿ ಸ್ಥಾವರದ ವಿರುದ್ಧ ಹಲವು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಾಗ ಆ ಬಗ್ಗೆ ಖೇದ ವ್ಯಕ್ತಪಡಿಸಿದವರಲ್ಲಿ ಅವರೂ ಒಬ್ಬರು. ಭಾರತೀಯ ಮಾಧ್ಯಮದವರ ಜತೆಗೂ ಉತ್ತಮ ಸ್ನೇಹ ಸಂಬಂಧ ಹೊಂದಿದ ಅವರು, ಎಲ್ಲವನ್ನೂ ಸಕಾರಾತ್ಮಕವಾಗಿಯೇ ಕಾಣುತ್ತಿದ್ದರು. ಪಾಕಿಸ್ತಾನ ಸೇನೆ ಕಾಶ್ಮೀರಭಾಗದ ಗಡಿಯ ಮೂಲಕ ಭಾರತದೊಳಕ್ಕೆ ಉಗ್ರರನ್ನು ಕಳುಹಿಸಿದ ವಿಧ್ವಂಸಕ ಕೃತ್ಯ ನಡೆಸುತ್ತಿರುವುದನ್ನು ನೇರವಾಗಿ ಖಂಡಿಸಿ, ಭಾರತದ ಪರ ನಿಲುವು ವ್ಯಕ್ತಪಡಿಸಿದ್ದರು. ಭಾರತ-ಪಾಕಿಸ್ತಾನ ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಬೇಕೆಂದು ಸ್ಪಷ್ಟವಾಗಿ ಪ್ರತಿಪಾದಿಸುತ್ತಿದ್ದರು. ಭಾರತದಲ್ಲಿದ್ದಾಗ ಹಿಮಾಚಲ ಪ್ರದೇಶದ ಕುಲುವಿಗೆ ಪದೇಪದೆ ಭೇಟಿ ನೀಡಿ ಅಲ್ಲಿ ಬಹುಕಾಲ ಕಳೆಯುತ್ತಿದ್ದರು. ರೋರಿಚ್ ಸ್ಮಾರಕ ಟ್ರಸ್ಟ್‍ಗೂ ಅನೇಕ ಬಾರಿ ಭೇಟಿ ಕೊಟ್ಟಿದ್ದರು.
ನ ಕಿಶಿನೆವ್ ಎಂಬ ಪಟ್ಟಣದಲ್ಲಿ 1949ರ ಜುಲೈ 22ರಂದು ಅಲೆಕ್ಸಾಂಡರ್ ಅವರ ಜನನ. ಮಾಸ್ಕೋ ಸ್ಟೇಟ್ ಇನ್‍ಸ್ಟಿಟ್ಯೂಟ್‍ನಲ್ಲಿ ಪದವಿ ಶಿಕ್ಷಣ ಪೂರೈಸಿದ ಅವರು, ಇಂಗ್ಲಿಷ್, ಹಿಂದಿ, ಉರ್ದು, ಫ್ರೆಂಚ್, ರೊಮಾನಿಯನ್ ಭಾಷೆಗಳನ್ನು ಬಲ್ಲವರಾಗಿದ್ದರು. ಹಿಂದಿ ಹಾಗೂ ಇಂಗ್ಲಿಷ್‍ನಲ್ಲಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಹಲವು ಲೇಖನಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ ಕೂಡ.

ಟಾಟಾ ಸ್ಕೈನಲ್ಲಿ ಉದಯಿಸಿದ ಚಂದ್ರ

ಹೌದು.. ಅಂದು 2016ರ ಅಕ್ಟೋಬರ್ 24. ಸೂರ್ಯ ಅಸ್ತಮಿಸುವ ಹೊತ್ತಿನಲ್ಲಿ 100 ಶತಕೋಟಿಗೂ ಅಧಿಕ ಮೌಲ್ಯದ ಟಾಟಾ ಸಾಮ್ರಾಜ್ಯ ಅಧ್ಯಕ್ಷರಾಗಿದ್ದ ಸೈರಸ್ ಪಲ್ಲೋನ್ಜಿ ಮಿಸ್ತ್ರಿ ಪದಚ್ಯುತರಾಗಿದ್ದು, ರತನ್ ಟಾಟಾ ಅವರನ್ನೇ ನಾಲ್ಕು ತಿಂಗಳ ಮಟ್ಟಿಗೆ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ವಿಷಯ ಭಾರಿ ಸಂಚಲನ ಮೂಡಿಸಿತ್ತು. ತರುವಾಯದ ಬೆಳವಣಿಗೆಗಳು ಎಲ್ಲರಿಗೂ ಗೊತ್ತಿರುವಂಥದ್ದೇ. ಟಾಟಾ ಗ್ರೂಪ್ ಬೆಳವಣಿಗೆ ಗಮನಿಸುತ್ತಿದ್ದವರಿಗೆ ಕಳೆದ ಗುರುವಾರ(ಜ.12) ಮತ್ತೊಂದು ಅಚ್ಚರಿ ಕಾದಿತ್ತು. ಟಾಟಾ ಗ್ರೂಪ್ ಅಧ್ಯಕ್ಷರಾಗಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್)ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎನ್. ಚಂದ್ರಶೇಖರನ್(54 ವರ್ಷ) ಅವರು ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಸಂಚಲನಕ್ಕೆ ಕಾರಣವಾಗಿತ್ತು. ಈ ನೇಮಕದೊಂದಿಗೆ ಟಾಟಾ ಸಾಮ್ರಾಜ್ಯದೊಳಗಿಂದಲೇ `ಚಂದ್ರ’ ಉದಯಿಸಿದಂತಾಗಿದೆ.
ಚಂದ್ರಶೇಖರನ್ ಆಪ್ತರಿಂದ `ಚಂದ್ರ’, `ಚಂದ್ರು’ ಎಂದೇ ಕರೆಯಿಸಿಕೊಳ್ಳುತ್ತಿರುವವರು. ಟಾಟಾ ಟ್ರಸ್ಟ್‍ನ ಈ ಸಲದ ಆಯ್ಕೆ ಹೇಗಿದೆ ಎಂದರೆ, ಅಧ್ಯಕ್ಷ ಸ್ಥಾನಕ್ಕೆ ನಿಯೋಜಿತರಾದವರು ಟಾಟಾ ಕುಟುಂಬದವರೂ ಅಲ್ಲ, ಟಾಟಾ ಷೇರುದಾರರೂ ಅಲ್ಲ, ಮಿಸ್ತ್ರಿ ಕುಟುಂಬಕ್ಕೆ ಸೇರಿದವರೂ ಅಲ್ಲ, ಪೂರ್ತಿ ಹೊರಗಿನವರು. ಆದಾಗ್ಯೂ, `ಒಳಗಿನವರು’ ಎಂಬುದು ವಿಶೇಷ. ಚಂದ್ರಶೇಖರನ್ ಅವರ ಜತೆಗೆ ಸ್ಪರ್ಧಿಗಳಾಗಿ ಜಾಗ್ವಾರ್ ಲ್ಯಾಂಡ್ ರೋವರ್‍ನ ಸಿಇಒ ರಾಲ್ಫ್ ಸ್ಪೆಥ್, ಯೂನಿಲಿವರ್‍ನ ಹರ್ಷ್ ಮನ್ವಾನಿ, ಸ್ಮಿತ್ ಗ್ರೂಪ್‍ನ ಜಾರ್ಜ್ ಬರ್ಕ್‍ಲಿ, ಪೆಪ್ಸಿ ಕಂಪನಿಯ ಸಿಇಒ ಇಂದ್ರಾ ನೂಯಿ ಮುಂತಾದವರಿದ್ದರು. ಮಿಸ್ತ್ರಿ ಅವರು ಪದಚ್ಯುತಗೊಂಡ ಬಳಿಕವಷ್ಟೇ ಚಂದ್ರಶೇಖರನ್ ಮತ್ತು ಸ್ಪೆಥ್ ಅವರು ಟಾಟಾ ಸನ್ಸ್‌ನ ಆಡಳಿತ ಮಂಡಳಿಯ ನಿರ್ದೇಶಕರಾಗಿ ಸೇರ್ಪಡೆಗೊಂಡಿದ್ದರು.
ಟಿಸಿಎಸ್‍ನಲ್ಲೇ ಮೂರು ದಶಕ ಕಾಲ ವಿವಿಧ ಹೊಣೆಗಾರಿಕೆಗಳನ್ನು ನಿಭಾಯಿಸಿದ ಚಂದ್ರಶೇಖರ್‍ಗೆ, ಟಾಟಾ ಗ್ರೂಪ್‍ನ ಸಂಸ್ಕøತಿ, ಮೌಲ್ಯ ಮತ್ತು ಆಚಾರ ವಿಚಾರಗಳ ಸ್ಪಷ್ಟತೆ ಇದೆ. ನಿಕಟಪೂರ್ವ ಅಧ್ಯಕ್ಷ ಮಿಸ್ತ್ರಿಯವರಲ್ಲಿ ಆ ಕೊರತೆ ಇದ್ದುದು ಸ್ಪಷ್ಟ. ಹೀಗಾಗಿ ಆಯ್ಕೆ ಸಮಿತಿಯು ಗ್ರೂಪ್‍ನ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಸ್ಪರ್ಧಿಗಳನ್ನು ತುಲನೆ ಮಾಡಿದಾಗ, ಚಂದ್ರಶೇಖರನ್ ಅವರ ಪ್ರೊಫೈಲ್‌ ಒಂದು ತೂಕ ಹೆಚ್ಚು ಬಿತ್ತು. ಇದೇ ಕಾರಣಕ್ಕೆ ಅವರ ಆಯ್ಕೆಯೂ ಆಯಿತು. ಇದರ ಬೆನ್ನಲ್ಲೇ, ಟಾಟಾ ಗ್ರೂಪ್‍ನ ಆಯ್ಕೆಯನ್ನು ಕಾರ್ಪೊರೇಟ್‌ ವಲಯ ಸ್ವಾಗತಿಸಿದ ಪರಿ, ಚಂದ್ರಶೇಖರನ್ ಅವರ ಸಾಮಥ್ರ್ಯಕ್ಕೆ ಕೈಗನ್ನಡಿ ಎಂಬಂತೆ ಇತ್ತು. ಪದವಿ ವಿದ್ಯಾಭ್ಯಾಸ ಮುಗಿಯುತ್ತಲೇ ಕೃಷಿ ಕ್ಷೇತ್ರದ ಕಡೆಗೆ ಒಲವು ತೋರಿದ್ದ ಅವರು ಇಂದು ಕಾರ್ಪೊರೇಟ್ ಕ್ಷೇತ್ರದ ಸಾಧಕರಾಗಿ ಹೊರಹೊಮ್ಮಿರುವುದು ವಿಶೇಷ.
ಈ ಬೆಳವಣಿಗೆಯ ನಂತರದಲ್ಲಿ, ಚಂದ್ರಶೇಖರನ್ ಬದುಕಿನ ಹಾದಿಯಲ್ಲಿ ಒಂದಷ್ಟು ದಿನ ಅವರೊಂದಿಗೆ ಒಡನಾಡಿದವರು ಒಬ್ಬೊಬ್ಬರಾಗಿ ಅವರ ಸಾಧನೆಯ ಹಾದಿಯ ವಿವರ ಬಿಚ್ಚಿಡತೊಡಗಿದ್ದಾರೆ. ಕೊಯಂಬತ್ತೂರಿನ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲ ಎಂ.ಗುರುಸ್ವಾಮಿ,`ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಚಂದ್ರಶೇಖರನ್, ಕಾಲೇಜು ಸೇರಿದ ಮೇಲಷ್ಟೆ ಇಂಗ್ಲಿಷ್ ಭಾಷೆಯನ್ನು ಸರಿಯಾಗಿ ಕಲಿತದ್ದು. 1983ರಲ್ಲಿ ಎನ್ ಚಂದ್ರಶೇಖರನ್ ಅವರು ಅನ್ವಯಿಕ ವಿಜ್ಞಾನದಲ್ಲಿ ಬಿಎಸ್ಸಿ ಪದವಿ ಪೂರ್ಣಗೊಳಿಸಿದ ಸಂದರ್ಭ, ಕೃಷಿ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದ್ದರು. ತಮಿಳು ಬ್ರಾಹ್ಮಣರಾದ ಚಂದ್ರಶೇಖರನ್ ಕುಟುಂಬ ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯ ಮೋಹನೂರು ಗ್ರಾಮದಲ್ಲಿ ಕೃಷಿ ಜಮೀನು ಹೊಂದಿತ್ತು. ಆದರೆ, ಚಂದ್ರಶೇಖರನ್ ಅವರಿಗೆ ಕಂಪ್ಯೂಟರ್ ವಿಷಯದಲ್ಲಿದ್ದ ಪರಿಣತಿ ನಮ್ಮ ಗಮನಕ್ಕೆ ಬಂದಿತ್ತು. ಉನ್ನತ ಶಿಕ್ಷಣದ ಕುರಿತಂತೆ ಚಂದ್ರಶೇಖರನ್ ಅವರ ತಂದೆ ವೃತ್ತಿಯಲ್ಲಿ ವಕೀಲರಾದ ಎಸ್.ನಟರಾಜನ್ ಅವರು ನಮ್ಮ ಜತೆ ಸಮಾಲೋಚನೆ ನಡೆಸಿದಾಗ, ಎಂಸಿಎ ಮಾಡಿಸುವಂತೆ ಸಲಹೆ ನೀಡಿದ್ದೆವು. ಚಾರ್ಟರ್ಡ್ ಅಕೌಂಟೆಂಟ್ ಆಗಬೇಕು ಎಂಬ ಆಸೆಯೂ ಚಂದ್ರಶೇಖರನ್‍ಗೆ ಇತ್ತು. ಅದರಂತೆ, ಅವರು ಚಂದ್ರಶೇಖರನ್‍ರನ್ನು ತಿರುಚ್ಚಿಯ ಪ್ರಾದೇಶಿಕ ಇಂಜಿನಿಯರಿಂಗ್ ಕಾಲೇಜಿ(ಸದ್ಯ ಇದು ಎನ್‍ಐಟಿ-ಟಿ ಎಂದೇ ಪ್ರಸಿದ್ಧ)ಗೆ ಎಂಸಿಎ ಕಲಿಯಲು ಸೇರಿಸಿದರು. ಅಲ್ಲಿ ಚಂದ್ರಶೇಖರನ್ ಪ್ರಥಮ ಬ್ಯಾಚಿನ ವಿದ್ಯಾರ್ಥಿ. ನಟರಾಜನ್ ಅವರಿಗೆ ಈಗ 84 ವರ್ಷ. ಮೊನ್ನೆ ಟಾಟಾ ಗ್ರೂಪ್ ಅಧ್ಯಕ್ಷರಾಗಿ ಚಂದ್ರಶೇಖರನ್ ಆಯ್ಕೆಯಾದ ವಿಚಾರ ಸುದ್ದಿಯಾಗುತ್ತಲೇ ಅವರು ಕರೆ ಮಾಡಿ, ಅಂದಿನ ಈ ಘಟನೆಗಳನ್ನೆಲ್ಲ ನೆನಪಿಸಿಕೊಂಡರು’ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಎಂಸಿಎ ಪದವಿ ಪಡೆದ ನಂತರದಲ್ಲಿ 1987ರಲ್ಲಿ ಟಿಸಿಎಸ್ ಕಂಪನಿಗೆ ಇಂಟರ್ನಿಯಾಗಿ ಸೇರ್ಪಡೆಗೊಂಡ ಅವರು, ಕಂಪನಿಯಲ್ಲಿ ಕೆಳಮಟ್ಟದಿಂದ ಕೆಲಸ ಮಾಡಿ ಆಡಳಿತ ನಿರ್ವಹಣೆ ಮಾಡುವ ಹಂತಕ್ಕೆ ಬೆಳೆದವರು. ಇಪ್ಪತ್ತು ವರ್ಷಗಳ ಅವಧಿಯಲ್ಲಿ ಕೆಳ ಹಂತದ ವಿವಿಧ ಹೊಣೆಗಾರಿಕೆಗಳನ್ನು ನಿಭಾಯಿಸಿದ ಅವರು, 2007ರಲ್ಲಿ ಕಂಪನಿಯ ಚೀಫ್ ಆಪರೇಟಿಂಗ್ ಆಫೀಸರ್ ಹೊಣೆಗಾರಿಕೆ ಹೊತ್ತುಕೊಂಡರು. ಅದಾಗಿ, ಎರಡು ವರ್ಷದ ಬಳಿಕ ಅದೇ ಕಂಪನಿಯ ಸಿಇಒ ಆಗಿ ನೇಮಕವಾದರು. ಅಂದು ಅವರು ಟಾಟಾ ಗ್ರೂಪ್‍ನ ಅತ್ಯಂತ ಯುವ ಸಿಇಒಗಳ ಪೈಕಿ ಒಬ್ಬರಾಗಿದ್ದರು. ಅವರ ಆಡಳಿತಾವಧಿಯಲ್ಲಿ ಟಿಸಿಎಸ್‍ನ ಆದಾಯ ಮೂರು ಪಟ್ಟು ಹೆಚ್ಚಿದ್ದು 17ಶತಕೋಟಿ ಡಾಲರ್ ತಲುಪಿದೆ.
ಕೆಲಸದ ವಿಷಯಕ್ಕೆ ಬಂದರೆ, ಚಂದ್ರಶೇಖರನ್ ಅವರು `ಟಫ್ ಟಾಸ್ಕ್‍ಮಾಸ್ಟರ್’. ಅವರ ಕೆಲಸದ ಶೈಲಿಯೇ ಅಂಥದ್ದು- ಜತೆಗಿರುವವರನ್ನು ಉತ್ತೇಜಿಸುತ್ತ, ಅವರನ್ನು ಸಬಲರನ್ನಾಗಿಸುತ್ತ ಮುನ್ನಡೆಯುವುದು. ಟಿಸಿಎಸ್‍ನ ಸಿಇಒ ಎಂಬ ಹೊಣೆಗಾರಿಕೆ ಹೊತ್ತುಕೊಂಡಾಗ ಅದನ್ನು ಸಂಘಟನಾತ್ಮಕವಾಗಿ ಮರುವಿನ್ಯಾಸಗೊಳಿಸುವ ದೊಡ್ಡ ಸವಾಲು ಅವರ ಎದುರಿಗಿತ್ತು. ಹಾಗೆ, ಕಂಪನಿಯನ್ನು 23 ಘಟಕಗಳನ್ನಾಗಿ ವಿಂಗಡಿಸಿ, ಅವುಗಳ ನಾಯಕರೆನಿಸಿದವರು ಉಳಿದವರ ಜತೆಗೂಡಿ ಕೆಲಸ ಮಾಡಬೇಕು ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ಹೀಗೆ, ಇಡೀ ವ್ಯವಸ್ಥೆಯನ್ನು ಬಲಗೊಳಿಸಿದ ಕೀರ್ತಿಗೆ ಅವರು ಭಾಜನರಾದರು. ಒಂದು ಕಂಪನಿಯನ್ನು ನಡೆಸುವುದಕ್ಕೂ 100ಕ್ಕೂ ಹೆಚ್ಚು ಕಂಪನಿಗಳ ಗುಂಪನ್ನು ಮುನ್ನಡೆಸುವುದಕ್ಕೂ ಬಹಳ ವ್ಯತ್ಯಾಸವಿದೆ. ಟಾಟಾ ಗ್ರೂಪ್‍ನಲ್ಲಿರುವ 100ಕ್ಕೂ ಹೆಚ್ಚು ಕಂಪನಿಗಳಲ್ಲಿ ಹಲವು ನಷ್ಟದಲ್ಲಿವೆ. ಬೆರಳೆಣಿಕೆ ಕಂಪನಿಗಳಷ್ಟೇ ಲಾಭದಲ್ಲಿವೆ. ಟಾಟಾ ಸ್ಟೀಲ್‍ನ ಯುರೋಪಿಯನ್ ವ್ಯವಹಾರ ಕಳೆದ ಐದು ವರ್ಷಗಳಿಂದ 34,000 ಕೋಟಿ ರೂಪಾಯಿ ನಷ್ಟದಲ್ಲಿದೆ. ಟಾಟ ಮೋಟಾರ್ಸ್‍ನ ಗ್ರಾಹಕ ವಾಹನಗಳ ಮಾರುಕಟ್ಟೆ ಪಾಲು ಕಳೆದ ಐದು ವರ್ಷಗಳ ಅವಧಿಯಲ್ಲಿ ತೀವ್ರವಾಗಿ ಕುಸಿಇದೆ. ಪ್ರಯಾಣಿಕ ವಾಹನಗಳ ಮಾರುಕಟ್ಟೆ ಪಾಲು ಕೂಡ ಕಳೆದ ವರ್ಷ ಶೇಕಡ 5 ಕುಸಿತ ಕಂಡಿದೆ. ಡೊಕೊಮೊ ಜತೆಗಿನ ಟಾಟಾ ಟೆಲಿಕಾಂ ವಹಿವಾಟಿನ ನಷ್ಟ, ನಷ್ಟದಲ್ಲಿರುವ ಹೋಟೆಲ್ ಉದ್ಯಮ ಹೀಗೆ ಸಾಲು ಸಾಲು ಸವಾಲುಗಳು ಚಂದ್ರಶೇಖರನ್ ಹಾದಿಯಲ್ಲಿದೆ. ಫೆಬ್ರವರಿ 21ರಂದು ಹೊಣೆಗಾರಿಕೆ ಸ್ವೀಕರಿಸಲಿರುವ ಅವರು ಈ ಎಲ್ಲ ಸವಾಲುಗಳನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದು ಸದ್ಯದ ಕುತೂಹಲ.
ಇನ್ನು ವೈಯಕ್ತಿಕ ವಿಚಾರಕ್ಕೆ ಬಂದರೆ, ಮಧಮೇಹ ಇರುವುದರಿಂದಾಗಿ ಕಳೆದ ಒಂಭತ್ತು ವರ್ಷಗಳಿಂದ ಬೆಳಗ್ಗೆ ಎದ್ದು ಜಾಗಿಂಗ್ ಮಾಡುತ್ತಾರೆ. ಮ್ಯಾರಥಾನ್ ಓಟಗಳಲ್ಲಿ ಭಾಗವಹಿಸುತ್ತಿರುವ ಕಾರಣ `ಮ್ಯಾರಥಾನ್ ರನ್ನರ್’ ಎಂದೂ ಗುರುತಿಸಿಕೊಂಡಿದ್ದಾರೆ. ಪ್ರಾಣಿ ಪ್ರಿಯರಾಗಿರುವ ಅವರು ರೇ ಎಂಬ ನಾಯಿಯೊಂದನ್ನು ಸಾಕಿದ್ದರು. ಅದು 2014ರಲ್ಲಿ ನಿಧನವಾಗಿದೆ. ಸಮಯಾವಕಾಶ ಇದ್ದಾಗೆಲ್ಲ ಫೋಟೊಗ್ರಫಿ ಮಾಡುತ್ತಿರುತ್ತಾರೆ. ಪತ್ನಿ ಲಲಿತಾ, ಮಗ ಪ್ರಣವ್. ಮುಂಬೈನಲ್ಲೇ ವಾಸ.

ದೆಹಲಿಯ ಆಡಳಿತಕ್ಕೆ ಹಳೇ ಐಎಎಸ್ ಅಧಿಕಾರಿ

anil-baijal-6ರಾಷ್ಟ್ರ ರಾಜಧಾನಿ ಪ್ರದೇಶ ದೆಹಲಿ ಒಂದು ರಾಜ್ಯ ಎಂಬುದು ನಿಜವಾದರೂ ಅದಕ್ಕೆ ಪೂರ್ಣ ಪ್ರಮಾಣದ ರಾಜ್ಯದ ಸ್ಥಾನಮಾನವಿಲ್ಲ. ವಿಧಾನಸಭೆ ಇದ್ದರೂ ಆಡಳಿತದ ಪೂರ್ಣ ಹೊಣೆ ರಾಜ್ಯ ಸರ್ಕಾರದ್ದಲ್ಲ. ಆರಂಭದಿಂದಲೂ ಅಂದರೆ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಿಂದಲೂ ಇದು ಹೀಗೆಯೇ ಮುಂದುವರಿದಿದೆ. ಆರಂಭದಲ್ಲಿ ‘ಪಾರ್ಟ್ -ಸಿ’ ರಾಜ್ಯವಾಗಿ ಪರಿಗಣಿಸಲ್ಪಟ್ಟ ದೆಹಲಿ ನೇರವಾಗಿ ರಾಷ್ಟ್ರಪತಿ ಆಡಳಿತಕ್ಕೆ ಒಳಪಟ್ಟಿತ್ತು. ಮೊದಲ ರಾಜ್ಯ ಸರ್ಕಾರ(1952) ಅಸ್ತಿತ್ವಕ್ಕೆ ಬಂದಾಗ ಅದಕ್ಕೆ ಸೀಮಿತ ಶಾಸನಾತ್ಮಕ ಅಧಿಕಾರವಿತ್ತು. ಉಳಿದೆಲ್ಲ ಅಧಿಕಾರವೂ ದೆಹಲಿಯ ಮುಖ್ಯ ಆಯುಕ್ತರ ಕೈಯಲ್ಲಿತ್ತು. ದೆಹಲಿ ಸರ್ಕಾರದ ಪಾತ್ರ ಸಲಹೆ ನೀಡುವುದಕ್ಕಷ್ಟೇ ಸೀಮಿತವಾಗಿತ್ತು. ತರುವಾಯ, 1956ರಲ್ಲಿ ಭಾಷಾವಾರು ಪ್ರಾಂತ್ಯ ರಚನೆಯಾದಾಗ ದೆಹಲಿಗೆ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ಸಿಕ್ಕಿತು. 1966ರ ದೆಹಲಿ ಆಡಳಿತ ಕಾಯ್ದೆ ಪ್ರಕಾರ 56 ಚುನಾಯಿತ ಹಾಗೂ ರಾಷ್ಟ್ರಪತಿಯವರಿಂದ ನೇರ ನಾಮನಿರ್ದೇಶನ ಹೊಂದಿದ ಐವರು ಸದಸ್ಯರ ಶಾಸನಸಭೆ ರಚಿಸುವುದಕ್ಕೆ ಅವಕಾಶವಾಯಿತು. ಮುಖ್ಯ ಆಯುಕ್ತರ ಬದಲಾಗಿ ಲೆಫ್ಟಿನೆಂಟ್ ಗವರ್ನರ್ (ಉಪರಾಜ್ಯಪಾಲ) ಬಂದರು. ಈ ನೇಮಕಕ್ಕೆ ಸಂವಿಧಾನದ ಅನುಚ್ಛೇದ 239ರಲ್ಲಿ ಅವಕಾಶ ಕಲ್ಪಿಸಲಾಗಿದೆ. 1993ರಲ್ಲಿ ದೆಹಲಿಗೆ ರಾಜ್ಯದ ಸ್ಥಾನಮಾನ ಸಿಕ್ಕಿ, ವಿಧಾನಸಭೆ-ಮುಖ್ಯಮಂತ್ರಿ ಹೊಂದುವುದು ಸಾಧ್ಯವಾಯಿತು. ಆದಾಗ್ಯೂ, ಮುಖ್ಯಮಂತ್ರಿಯು ಅಧಿಕಾರವನ್ನು ಅಲ್ಲಿನ ಉಪ ರಾಜ್ಯಪಾಲರ ಜತೆಗೆ ಹಂಚಿಕೊಳ್ಳಬೇಕು. ವಿಶೇಷವಾಗಿ ಮುಖ್ಯ ಕಾರ್ಯದರ್ಶಿ, ಪೊಲೀಸ್ ಆಯುಕ್ತ, ಗೃಹ ಕಾರ್ಯದರ್ಶಿ, ಭೂ ಕಾರ್ಯದರ್ಶಿ ನೇಮಕ ಹಾಗೂ ಅವರ ಕೆಲಸ ಕಾರ್ಯ ನಿರ್ವಹಣೆ ಗಮನಿಸುವ ಹೊಣೆ ಉಪರಾಜ್ಯಪಾಲರದ್ದು. ಇದರಲ್ಲಿ ಮುಖ್ಯಮಂತ್ರಿ ಹಸ್ತಕ್ಷೇಪ ಮಾಡುವಂತಿಲ್ಲ. ದೆಹಲಿ ರಾಷ್ಟ್ರದ ಶಕ್ತಿಕೇಂದ್ರವೂ ಆಗಿರುವುದರಿಂದ, ದೇಶದ ಸುರಕ್ಷತೆ, ಭದ್ರತೆಯ ದೃಷ್ಟಿ ಯಿಂದಲೂ ಇಂತಹದೊಂದು ಅಧಿಕಾರ ಹಂಚಿಕೆ ಅನಿವಾರ್ಯ ಎಂಬುದು ಇದರ ಹಿಂದಿನ ತರ್ಕ.

ಕೇಂದ್ರದಲ್ಲಿ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿದ ಬಳಿಕ ನಡೆದ ದೆಹಲಿ ಚುನಾವಣೆಯಲ್ಲಿ ಅದಾಗ ತಾನೆ ಹುಟ್ಟಿಕೊಂಡ ಆಮ್ ಆದ್ಮಿ ಪಕ್ಷ ಗೆಲುವು ಸಾಧಿಸಿ, ರಾಜಕೀಯ ಅನನುಭವಿ ಅರವಿಂದ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಅಲ್ಲಿಂದೀಚೆಗೆ ದೆಹಲಿಯಲ್ಲಿ ನಡೆದುದು ಅಕ್ಷರಶಃ ಹಗ್ಗಜಗ್ಗಾಟ. ಅದೂ ಉಪರಾಜ್ಯಪಾಲ ನಜೀಬ್ ಜಂಗ್ ಅವರ ಜತೆ. ಎಷ್ಟೆಂದರೆ ಸಾಂವಿಧಾನಿಕ ಬಿಕ್ಕಟ್ಟಿನ ತನಕ ತಲುಪಿತ್ತು ಈ ಕುಸ್ತಿ. ಕೊನೆಗೆ, ಕಳೆದ ತಿಂಗಳ 22ರಂದು ನಜೀಬ್ ಜಂಗ್ ಅವರು ಇದ್ದಕ್ಕಿದ್ದಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾಗಿ ತಿಳಿಸಿದರು. ಇದಕ್ಕೂ ಮುನ್ನ ಅವರು ಪ್ರಧಾನಿ ಸಚಿವಾಲಯಕ್ಕೆ ತೆರಳಿ ಪ್ರಧಾನಿ ಜತೆಗೆ ಮಾತುಕತೆ ನಡೆಸಿದ್ದರು. ಹಾಗೆ, ಕಳೆದ ತಿಂಗಳ ಅಂತ್ಯಕ್ಕೆ (ಡಿ.30) ದೆಹಲಿಯಲ್ಲಿ ಹೊಸ ಉಪರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದವರು ಅನಿಲ್ ಬೈಜಲ್.

ದೆಹಲಿಯ ಉಪರಾಜ್ಯಪಾಲರಾಗಿ ನೇಮಕವಾದವರು ಮತ್ತು ಅವರ ಹೊಣೆಗಾರಿಕೆ ಬಗ್ಗೆ ಹೇಳುವ ಮುನ್ನ, ಇಷ್ಟು ಪೀಠಿಕೆ ನೀಡಿದರಷ್ಟೇ ವಿಷಯ ಸರಳವಾಗಿ ಅರ್ಥವಾದೀತು. ಇನ್ನೊಂದು ವಿಶೇಷ ಅಂದರೆ ದೆಹಲಿಯ ಉಪರಾಜ್ಯಪಾಲರಾದವರ ಪೈಕಿ ಬಹುತೇಕರು ಐಎಎಸ್ ಅಧಿಕಾರಿಗಳಾಗಿದ್ದವರು. ಈಗ 21ನೇ ಉಪರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿರುವ ಅನಿಲ್ ಬೈಜಲ್ ಕೂಡ ನಿವೃತ್ತ ಐಎಎಸ್ ಅಧಿಕಾರಿ. ಎಪ್ಪತ್ತು ವರ್ಷ ವಯಸ್ಸಿನ ಅನಿಲ್ ಬೈಜಲ್, 1969ರ ಬ್ಯಾಚಿನ ಕೇಂದ್ರಾಡಳಿತ ಪ್ರದೇಶ ಕೇಡರ್ನ ಐಎಎಸ್ ಅಧಿಕಾರಿ. ಅನಿಲ್ ಬೈಜಲ್ ಮೂವತ್ತೇಳು ವರ್ಷದ ಸೇವಾವಧಿಯಲ್ಲಿ ಗೃಹ ಸಚಿವಾಲಯವಲ್ಲದೇ, ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರಾಗಿ, ಅಂಡಮಾನ್ ನಿಕೋಬಾರ್ನ ಮುಖ್ಯಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಇಂಡಿಯನ್ ಏರ್ಲೈನ್ಸ್ನ ಚೇರ್ಮನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದ ಬೈಜಲ್, ಆ ಸಂಸ್ಥೆಯನ್ನು ನಷ್ಟದಿಂದ ಮೇಲೆತ್ತಲು ಬಹಳ ಶ್ರಮವಹಿಸಿದ್ದರು. ಇದಲ್ಲದೇ, ದೆಹಲಿಯ ತೆರಿಗೆ ಮತ್ತು ಅಬಕಾರಿ ಮಾರಾಟ ಆಯುಕ್ತರಾಗಿ, ಗೋವಾದ ಅಭಿವೃದ್ಧಿ ಆಯುಕ್ತರ ಹೊಣೆಗಾರಿಕೆಯನ್ನೂ ನಿಭಾಯಿಸಿದ್ದರು. ನೇಪಾಳದಲ್ಲಿ ಭಾರತದ ನೆರವು ಯೋಜನೆಯ ಕೌನ್ಸಿಲರ್ ಇನ್ಚಾರ್ಜ್ ಆಗಿದ್ದ ಅವರು, ಮನಮೋಹನ್ ಸಿಂಗ್ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಜಾರಿಗೊಳಿಸಿದ 60,000 ಕೋಟಿ ರೂಪಾಯಿ ವೆಚ್ಚದ ಜವಾಹರಲಾಲ್ ನೆಹರೂ ನ್ಯಾಷನಲ್ ಅರ್ಬನ್ ರಿನ್ಯೂವೆಲ್ ಮಿಷನ್ (ಜೆಎನ್ಎನ್ಯುುಆರ್ಎಂ) ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಪ್ರಸಾರ ಭಾರತಿಯ ಸಿಇಒ ಆಗಿಯೂ ಹಲವು ಬಹುಮುಖ್ಯ ನಿರ್ಣಯಗಳನ್ನು ಅವರು ತೆಗೆದುಕೊಂಡಿದ್ದರು.

ಅನಿಲ್ ಬೈಜಲ್ ಅವರು ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಸರ್ಕಾರವಿದ್ದಾಗ 2004ರ ಫೆಬ್ರವರಿಯಲ್ಲಿ ಗೃಹ ಕಾರ್ಯದರ್ಶಿಯಾಗಿ ನೇಮಕವಾಗಿದ್ದರು. ಆದರೆ, ಅದೇ ವರ್ಷ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಯುಪಿಎ ಗೆಲುವು ಸಾಧಿಸಿ ಅಧಿಕಾರ ಚುಕ್ಕಾಣಿ ಹಿಡಿದಾಗ, ಅವರನ್ನು ಅದೇ ವರ್ಷ ಜುಲೈ 1ರಂದು ನಾಗರಿಕ ವಿಮಾನಯಾನ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಯಿತು. ಕೊನೆಗೆ 2006ರ ಅಕ್ಟೋಬರ್ನಲ್ಲಿ ನಗರಾಭಿವೃದ್ಧಿ ಕಾರ್ಯದರ್ಶಿಯಾಗಿ ನಿವೃತ್ತರಾಗುವ ವೇಳೆಗೆ ಎಂಎಂ ಕುಟ್ಟಿ ಅವರು ಜಂಟಿ ಕಾರ್ಯದರ್ಶಿಯಾಗಿ ನಗರಾಭಿವೃದ್ಧಿ ಸಚಿವಾಲಯಕ್ಕೆ ಸೇರ್ಪಡೆಗೊಂಡಿದ್ದರು. ಪ್ರಸ್ತುತ, ಎಂಎಂ ಕುಟ್ಟಿ ದೆಹಲಿಯ ಮುಖ್ಯಕಾರ್ಯದರ್ಶಿಯಾಗಿರುವುದು ವಿಶೇಷ.

ನಿವೃತ್ತಿಯ ಬಳಿಕ ವಿವೇಕಾನಂದ ಇಂಟರ್ನ್ಯಾಷನಲ್ ಫೌಂಡೇಷನ್ನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು ಬೈಜಲ್. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಈ ಫೌಂಡೇಷನ್ನ ಸಂಸ್ಥಾಪಕ ನಿರ್ದೇಶಕರು. ಪ್ರಧಾನ ಮಂತ್ರಿಯವರ ಪ್ರಿನ್ಸಿಪಲ್ ಸೆಕ್ರಟರಿ, ಹೆಚ್ಚುವರಿ ಮುಖ್ಯಕಾರ್ಯದರ್ಶಿ ಮುಂತಾದವರು ಕೂಡ ಇದೇ ಫೌಂಡೇಷನ್ನಲ್ಲಿ ಕೆಲಸ ಮಾಡಿದವರೆಂಬುದು ವಿಶೇಷ.

ವಿವೇಕಾನಂದ ಫೌಂಡೇಷನ್ ಕೆಲಸಕ್ಕೆ ಹೊರತಾಗಿ, ಬೈಜಲ್ ಅವರು ಐಡಿಎಫ್ ಬ್ಯಾಂಕ್, ಫ್ಯೂಚರ್ ಮಾರ್ಕೆಟ್ ನೆಟ್ವರ್ಕ್ಸ್, ಅಗ್ರೆ ಡೆವಲಪರ್ಸ್, ಐಟಿಸಿ ಫುಡ್ಸ್, ಡಿಎಲ್ಎಫ್ ಪ್ರಮೆರಿಕ ಲೈಫ್ ಇನ್ಶೂರೆನ್ಸ್, ಅರ್ಬನ್ ಸ್ಪೇಸ್ ಕನ್ಸಲ್ಟಂಟ್ಸ್, ಅಪ್ನಾ ಅಧಿಕಾರ್ ಲೀಗಲ್ ಸರ್ವೀಸಸ್, ಬೆಂಗಳೂರು ಮೆಟ್ರೋ ರೈಲ್ ಕಾರ್ಪೆರೇಷನ್ ಸೇರಿ ಹಲವು ಕಾರ್ಪೆರೇಟ್ ಸಂಸ್ಥೆಗಳ ಆಡಳಿತ ಮಂಡಳಿಯಲ್ಲಿ ಸಲಹೆಗಾರರಾಗಿ, ಪದಾಧಿಕಾರಿ ಯಾಗಿ, ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದಾರೆ. ಸದ್ಯದ ಅವರ ನೇಮಕ ರಾಜಕೀಯ ವಾಗಿ ಹೆಚ್ಚು ಮಹತ್ವ ಪಡೆದುಕೊಳ್ಳುವಂಥದ್ದು. ಪ್ರಧಾನಮಂತ್ರಿ ನರೇಂದ್ರ ಮೋದಿ ಆಪ್ತ ಬಳಗದಲ್ಲಿರುವ ಬೈಜಲ್ ಅವರು, ಸದ್ಯದ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾರೆ ಎಂಬ ಕುತೂಹಲವಿದೆ. ಈಗಾಗಲೇ ದೆಹಲಿಯ ಸ್ಥಳೀಯಾಡಳಿತಕ್ಕೆ ಚುರುಕು ಮುಟ್ಟಿಸಿರುವ ಅವರು, ಮುಂದಿನವಾರ ಮೊದಲ ವಿಧಾನಸಭಾ ಅಧಿವೇಶನದಲ್ಲಿ ಭಾಗಿಯಾಗಲಿದ್ದಾರೆ. ದೆಹಲಿಯ ರಾಜಕಾರಣ ಅವರಿಗೆ ಹೊಸತಲ್ಲ. ಅಲ್ಲಿನ ಅಧಿಕಾರಿವರ್ಗ ಹಾಗೂ ರಾಜಕಾರಣಿಗಳೂ ಹೊಸಬರಲ್ಲ. ಹೀಗಾಗಿ, ಭವಿಷ್ಯದಲ್ಲಿ ಎಎಪಿ ನಾಯಕರು ಜಂಗ್ ಅವಧಿಯಂತೆ ಬೈಜಲ್ ಅವಧಿಯಲ್ಲೂ ನಿದ್ರಾರಹಿತ ದಿನಗಳನ್ನು ನೋಡಬೇಕಾಗಿ ಬಂದರೂ ಅಚ್ಚರಿಯಿಲ್ಲ ಎನ್ನುತ್ತಿದೆ ರಾಜಕೀಯ ಪಂಡಿತರ ಚಾವಡಿ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡುವೆ ಹಗ್ಗಜಗ್ಗಾಟವೇರ್ಪಡದಂತೆ, ಸಮರ್ಪಕ ಕೊಂಡಿಯಾಗಿ ಕಾರ್ಯನಿರ್ವಹಿಸುವ ದೊಡ್ಡ ಸವಾಲು ಅವರೆದುರಿಗಿದೆ.

ಬೈಜಲ್ ಅವರು ಅಲಹಾಬಾದ್ ಯೂನಿವರ್ಸಿಟಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಈಸ್ಟ್ ಆನ್ಗ್ಲಿಯಾ ಯೂನಿರ್ವಸಿಟಿಯಿಂದ ಅಭಿವೃದ್ಧಿ ಅರ್ಥಶಾಸ್ತ್ರದಲ್ಲಿ ಮತ್ತೊಂದು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇಷ್ಟು ಬಿಟ್ಟರೆ, ಅವರ ವೈಯಕ್ತಿಕ ವಿಚಾರಗಳು ಹೆಚ್ಚು ಲಭ್ಯವಿಲ್ಲ.

ಆದಾಯ ಕರಾಮತ್ತು ತೋರಿದರೆ ಎಚ್ಚರ!

ಕಾಳಧನ ಸಂಗ್ರಹ ಹಾಗೂ ತೆರಿಗೆ ವಂಚನೆ ನಮ್ಮ ದೇಶವನ್ನು ಯಾವ ರೀತಿ ವ್ಯಾಪಿಸಿದೆ ಎಂಬುದನ್ನು ಅರಿಯಬೇಕಾದರೆ ಆದಾಯ ತೆರಿಗೆ ಇಲಾಖೆ ಬಿಡುಗಡೆ(ಡಿ.22) ಮಾಡಿದ `ತೆರಿಗೆ ಸಂಬಂಧಿ ಅಂಕಿ ಅಂಶ’ದ ಹೇಳಿಕೆ ಮತ್ತು ಕಳೆದ ಐದು ವರ್ಷಗಳ ದತ್ತಾಂಶವನ್ನು ಒಮ್ಮೆ ಅವಲೋಕಿಸಬೇಕು. ಆಗ, ಕೇಂದ್ರ ಸರ್ಕಾರವು ಕಾಳಧನ ಸಂಗ್ರಹ ಹಾಗೂ ತೆರಿಗೆ ವಂಚನೆ ತಡೆಗೆ ತೆಗೆದುಕೊಂಡಿರು ಕಠಿಣ ಕ್ರಮಗಳು ಅವಶ್ಯ ಮತ್ತು ಸಮರ್ಥನೀಯವೆನಿಸುವುದು.

vittavani-article-2-jan-2017`ಅಧಿಕ ಮುಖಬೆಲೆಯ ನೋಟುಗಳ ಮಾನ್ಯತೆ ರದ್ದುಗೊಳಿಸಿದ ನಂತರದಲ್ಲಿ ಕಾರು ಖರೀದಿಸಿದವರ ವಿವರ ನೀಡಿ’- ಇದುಕಾರು ಡೀಲರ್‍ಗಳಿಗೆ ಕೇಂದ್ರ ಸರ್ಕಾರದ ಇತ್ತೀಚಿನ ಸೂಚನೆ. ಕಾಳಧನಿಕರು, ತೆರಿಗೆ ವಂಚಕರು ಈ ರೀತಿ ಕೂಡ ತಮ್ಮಲ್ಲಿರುವ ಹಣವನ್ನು ವಿನಿಯೋಗಿಸಿರಬಹುದೆಂಬ ಸುಳಿವು ಲಭಿಸಿz್ದÉೀ ಕೇಂದ್ರ ಸರ್ಕಾರ ಇಂಥ ಸೂಚನೆ ನೀಡುವುದಕ್ಕೆ ಕಾರಣವಾಗಿದ್ದು.
ಇದಕ್ಕೆ ಪೂರಕವಾಗಿ, ಇತ್ತೀಚೆಗೆ ಡಿಸೆಂಬರ್ 22ರಂದು ಆದಾಯ ತೆರಿಗೆ ಇಲಾಖೆ ಒಂದು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿತ್ತು. ಅದರ ಪ್ರಕಾರ, 2014-15ನೇ ಹಣಕಾಸು ವರ್ಷದಲ್ಲಿ ತೆರಿಗೆ ಕಟ್ಟಲು ಬಾಧ್ಯಸ್ಥರಾದ ಆದರೆ, ತೆರಿಗೆ ಪಾವತಿಸದೇ ಇರುವ 67.54 ಲಕ್ಷ ಪೌರರನ್ನು ಇಲಾಖೆಯ ಆದಾಯ ತೆರಿಗೆ ರಿಟನ್ರ್ಸ್ ಸಲ್ಲಿಸದವರ ಮೇಲೆ ನಿಗಾ ವಹಿಸುವ ವ್ಯವಸ್ಥೆ (Non-filers Monitoring System-NMS) ಪತ್ತೆ ಹಚ್ಚಿದೆ. ಇವರ ಸಂಪೂರ್ಣ ವಿವರ ಕೇಂದ್ರೀಯ ನೇರತೆರಿಗೆ ಮಂಡಳಿಯ ದತ್ತಾಂಶದಲ್ಲಿ ಲಭ್ಯವಿದೆ.
ತೆರಿಗೆದಾರರ ವಿವರ
ಆದಾಯ ತೆರಿಗೆ ಇಲಾಖೆ ಮೂಲಗಳ ಪ್ರಕಾರ, 2014-15ನೇ ಸಾಲಿನಲ್ಲಿ ಆದಾಯ ತೆರಿಗೆ ರಿಟನ್ರ್ಸ್ ಸಲ್ಲಿಸಿದವರ ಸಂಖ್ಯೆ 3.65 ಕೋಟಿ. ಈ ಪೈಕಿ 5 ಲಕ್ಷ ಮೇಲ್ಪಟ್ಟ ಆದಾಯ ಹೊಂದಿದವರು 5.5 ಲಕ್ಷ. ಒಟ್ಟು ತೆರಿಗೆಯ ಪಾಲಿನಲ್ಲಿ ಇವರ ಪಾಲು ಶೇಕಡ 57. ಆದರೆ ತೆರಿಗೆದಾರರ ಸಂಖ್ಯೆ ವಿಚಾರಕ್ಕೆ ಬಂದರೆ ಇವರ ಪಾಲು ಕೇವಲ ಶೇಕಡ 1.5. ಹಾಗೆಯೇ, 10 ಲಕ್ಷ ಮೇಲ್ಪಟ್ಟ ಆದಾಯ ತೋರಿಸಿ ತೆರಿಗೆ ಪಾವತಿಸಿದವರ ಸಂಖ್ಯೆ 24.4 ಲಕ್ಷ. ಆದಾಗ್ಯೂ, ಈ ಅವಧಿಯಲ್ಲಿ ಖರೀದಿಯಾದ ಕಾರುಗಳ ಸಂಖ್ಯೆ 25 ಲಕ್ಷ. ಇದರಲ್ಲಿ 35,000 ಐಷಾರಾಮಿ ಕಾರುಗಳು. ಎಂಥ ವಿಚಿತ್ರ ನೋಡಿ. ತೆರಿಗೆ ಪಾವತಿದಾರರ ಸಂಖ್ಯೆ ಕಡಿಮೆ ಇದ್ದರೂ ಕಾರು ಖರೀದಿದಾರರ ಸಂಖ್ಯೆ ಕಮ್ಮಿಯಲ್ಲ.
ಇನ್ನು 50 ಲಕ್ಷ ಮೇಲ್ಪಟ್ಟ ಆದಾಯ ಹೊಂದಿರುವುದಾಗಿ ಆದಾಯ ತೆರಿಗೆ ರಿಟನ್ರ್ಸ್ ಸಲ್ಲಿಸಿದವರ ಸಂಖ್ಯೆ 1.47 ಲಕ್ಷ. ಆದಾಯ ತೆರಿಗೆ ರಿಟನ್ರ್ಸ್ ಸಲ್ಲಿಸಿದ 3.65 ಕೋಟಿ ತೆರಿಗೆದಾರರ ಪೈಕಿ 1.61 ಕೋಟಿ ತೆರಿಗೆದಾರರ ತೆರಿಗೆಯನ್ನು ಅವರ ಆದಾಯದ ಮೂಲದಲ್ಲೇ ಕಡಿತಗೊಳಿಸಲಾಗಿದೆ. ಆದರೂ, ಇವರು ತೆರಿಗೆ ರಿಟನ್ರ್ಸ್ ಸಲ್ಲಿಸಿಲ್ಲ. ಅಲ್ಲದೇ, 2 ಲಕ್ಷಕ್ಕೂ ಕಡಿಮೆ ಆದಾಯ ಇರುವಂತಹ 5.32 ಲಕ್ಷ ಜನ ರಿಟನ್ರ್ಸ್ ಸಲ್ಲಿಸಿದವರ ಪೈಕಿ ಸೇರಿದ್ದಾರೆ. ಇವರು ತೆರಿಗೆ ವ್ಯಾಪ್ತಿಗೆ ಸೇರುವಂಥವರಲ್ಲ.

ಕಾರು ಖರೀದಿ ಜೋರು
ಅಧಿಕಾರಿಗಳು ಹೇಳುವ ಪ್ರಕಾರ, 2011ರಿಂದೀಚೆಗೆ ಪ್ರತಿವರ್ಷ ಸರಾಸರಿ 25 ಲಕ್ಷ ಕಾರುಗಳ ಮಾರಾಟವಾಗಿದೆ. ಅದರಲ್ಲೂ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಅನುಕ್ರಮವಾಗಿ 25.03 ಲಕ್ಷ, 26 ಲಕ್ಷ ಮತ್ತು 27 ಲಕ್ಷ ಕಾರುಗಳ ಮಾರಾಟವಾಗಿದ್ದಕ್ಕೆ ದಾಖಲೆ ಇದೆ. ಇದರ ಅರ್ಥ ಇಷ್ಟೇ – ಇನ್ನೂ ಹಲವರು ತಮ್ಮ ಆದಾಯ ವಿವರ ನೀಡದೇ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿದ್ದಾರೆ.
ಆದಾಯ ತೆರಿಗೆ ಇಲಾಖೆಯ ತೆರಿಗೆ ದತ್ತಾಂಶದ ಮಾಹಿತಿ ಅನುಸರಿಸಿ ಹೇಳುವುದಾದರೆ, 48,417 ತೆರಿಗೆದಾರರಿಗೆ ವಾರ್ಷಿಕ ಒಂದು ಕೋಟಿ ರೂಪಾಯಿಗೂ ಅಧಿಕ ಆದಾಯವಿದೆ. ಆದಾಗ್ಯೂ, ಪ್ರತಿವರ್ಷ ಮಾರಾಟವಾಗುವ ಬಿಎಂಡಬ್ಲುೃ, ಜಾಗ್ವಾರ್, ಆಡಿ, ಮರ್ಸಿಡೆಸ್, ಪೆÇೀರ್ಷೆ, ಮಸೆರಟಿ ಮುಂತಾದ ಐಷಾರಾಮಿ ಕಾರುಗಳ ಸಂಖ್ಯೆ ಸರಾಸರಿ 35,000.
ಸಾಮಾನ್ಯವಾಗಿ ಒಂದು ಕಾರಿನ ಸರಾಸರಿ ಆಯುಸ್ಸು ಏಳು ವರ್ಷ. ಸಾಮಾನ್ಯ ವ್ಯಕ್ತಿಯೊಬ್ಬ ಎರಡನೇ ಕಾರು ಖರೀದಿಸುತ್ತಾನೆ ಎಂದಾದರೂ ಅದು ಐದು ವರ್ಷದ ಬಳಿಕವಷ್ಟೇ. ಆದರೆ, ಪ್ರತಿವರ್ಷ 35,000ಕ್ಕೂ ಅಧಿಕ ಐಷಾರಾಮಿ ಕಾರು ಮಾರಾಟ ನಡೆಯುವುದು ಹೇಗೆ ಸಾಧ್ಯ? ಆದಾಯ ಮರೆಮಾಚಿದವರು ಇನ್ನೂ ಅನೇಕರಿದ್ದಾರೆ ಎಂದಲ್ಲವೇ ಇದರ ಅರ್ಥ?

ಜಿಡಿಪಿಯಲ್ಲಿ ತೆರಿಗೆ ಪಾಲು
ಭಾರತದ ಜಿಡಿಪಿಯಲ್ಲಿ ತೆರಿಗೆ ಆದಾಯದ ಪಾಲು ಶೇಕಡ 16.7. ಅಮೆರಿಕದಲ್ಲಿ ಇದು ಶೇಕಡ 25.4, ಜಪಾನ್‍ನಲ್ಲಿ 30.3. ಇದನ್ನು ಗಮನಿಸಿದರೆ, 2014-15ನೇ ಸಾಲಿನ ಹಣಕಾಸು ವರ್ಷದಲ್ಲಿ ಭಾರತದಲ್ಲಿದ್ದ ಜನಸಂಖ್ಯೆ ಹೆಚ್ಚು ಕಮ್ಮಿ 125 ಕೋಟಿ. ಈ ಪೈಕಿ 3.65 ಕೋಟಿ ಜನರಷ್ಟೇ ಆದಾಯ ತೆರಿಗೆ ರಿಟನ್ರ್ಸ್ ಸಲ್ಲಿಕೆ ಮಾಡಿದ್ದಾರೆ. ಅರ್ಥಾತ್ ಒಟ್ಟು ಜನಸಂಖ್ಯೆಯಲ್ಲಿ ತೆರಿಗೆಪಾವತಿದಾರರ ಪಾಲು ಶೇಕಡ 2.92 ಅಷ್ಟೆ. ಕಾಳಧನದ ಮೂಲಕ ನಡೆಯುತ್ತಿರುವ ಪರ್ಯಾಯ ಅರ್ಥ ವ್ಯವಸ್ಥೆಯ ಅಗಾಧತೆ ತಿಳಿಯಲು ಈ ಅಂಕಿ ಅಂಶ ಸಾಕು.

ಅನಾಣ್ಯೀಕರಣದ ಸಣ್ಣ ಎಫೆಕ್ಟ್
ಕೇಂದ್ರ ಸರ್ಕಾರ ಕಾಳಧನ ಮತ್ತು ತೆರಿಗೆ ವಂಚಕರ ವಿರುದ್ಧ ತೆಗೆದುಕೊಂಡ ಕಠಿಣ ಕ್ರಮದ ಫಲವಾಗಿ, ನವೆಂಬರ್ 10 ಮತ್ತು ನವೆಂಬರ್ 30ರ ನಡುವಿನ ಅವಧಿಯಲ್ಲಿ 1.77 ಲಕ್ಷ ಸಾಲಗಾರರು ಹಳೆಯ ನೋಟುಗಳನ್ನು ಉಪಯೋಗಿಸಿ ಸರಾಸರಿ 25 ಲಕ್ಷಕ್ಕೂ ಅಧಿಕ ಸಾಲವನ್ನು ಮರುಪಾವತಿಸಿದ್ದಾರೆ. ಇದರ ಒಟ್ಟು ಮೊತ್ತ ಮೊತ್ತ 50,000 ಕೋಟಿ ರೂಪಾಯಿಗೂ ಅಧಿಕ.

ಹಣಕಾಸು ಅವ್ಯವಹಾರದೆಡೆ ಐಟಿ ಕಣ್ಣು
ಅನಾಣ್ಯೀಕರಣ ಘೋಷಣೆಯಾದ ಬೆನ್ನಲ್ಲೇ ಅನೇಕ ಸಹಕಾರಿ ಬ್ಯಾಂಕ್‍ಗಳಲ್ಲಿ, ಎರಡು ವರ್ಷಗಳಿಂದ ನಿಸ್ತೇಜವಾಗಿದ್ದ ಜನಧನ ಖಾತೆಗಳಿಗೆ ಕಾಳಧನ ಹರಿದು ಬಂದಿತ್ತು. ಇದು 4 ಲಕ್ಷ ಕೋಟಿ ರೂಪಾಯಿಯಷ್ಟಾಗಬಹುದು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಿಯಮಗಳನ್ನು ಬಿಗಿಗೊಳಿಸುತ್ತ ಹೋದ ಕಾರಣ, ತರುವಾಯ ಸಹಕಾರಿ ಬ್ಯಾಂಕ್, ಜನಧನ ಖಾತೆಗೆ ಕಾಳಧನದ ಹರಿವು ಕಡಿಮೆಯಾಯಿತು. ಆದಾಯ ತೆರಿಗೆ ಇಲಾಖೆಯ ಡಿ.17ರ ದತ್ತಾಂಶ ಪ್ರಕಾರ, ಅಘೋಷಿತ ಆದಾಯದ ಪ್ರಮಾಣ 4 ಲಕ್ಷ ಕೋಟಿ ರೂ. ತಲುಪಿದೆ. ಈ ಹಣ 1.14 ಲಕ್ಷ ಬ್ಯಾಂಕ್ ಖಾತೆಗಳಿಗೆ ಸೇರ್ಪಡೆಯಾಗಿದ್ದು, ಅವುಗಳ ತಪಾಸಣೆಗೆ ಇಲಾಖೆಗೆ ಅಧಿಕಾರಿಗಳು ಈಗ ಸಜ್ಜಾಗಿದ್ದಾರೆ. ಈಗಾಗಲೇ ಇಲಾಖೆಯು 5,000 ಖಾತೆದಾರರಿಗೆ ನೋಟಿಸ್ ಕಳುಹಿಸಿದೆ.
————–

*ತಜ್ಞ ಅಭಿಪ್ರಾಯ

ತೆರಿಗೆ ಪಾವತಿಸಿದರೆ ಎಲ್ಲರಿಗೂ ಅನುಕೂಲ

ಕಳೆದೊಂದು ವರ್ಷದಿಂದ ತೆರಿಗೆ ವ್ಯವಸ್ಥೆಗೆ ಸಂಬಂಧಿಸಿದ ಧನಾತ್ಮಕ ಬೆಳವಣಿಗೆ ನಡೆಯುತ್ತಿದೆ. ಕಳೆದ ಎಪತ್ತು ವರ್ಷಗಳಿಂದ ಅನೇಕರು ತೆರಿಗೆ ಜಾಲದೊಳಕ್ಕೆ ಬಾರದೇ ಹಾಗೇ ಕಳೆದುಬಿಟ್ಟಿದ್ದಾರೆ. ಈಗ ಅವರಿಗೆ ತೆರಿಗೆ ಜಾಲದೊಳಕ್ಕೆ ಸೇರುವ ಅನಿವಾರ್ಯತೆ ಎದುರಾಗಿದೆ. ಇತ್ತೀಚೆಗೆ ತೆರಿಗೆ ಇಲಾಖೆ ಪ್ರಕಟಿಸಿದ ತೆರಿಗೆ ಪಾವತಿಸದವರ ವಿವರ, ಕಾರು ಖರೀದಿ ಇತ್ಯಾದಿಗಳು ಎಲ್ಲರನ್ನೂ ಎಚ್ಚರಿಸುವ ಕ್ರಮ ಎಂದೇ ಹೇಳಬೇಕು.
ಆದಾಯ ತೆರಿಗೆ ಇಲಾಖೆಯಲ್ಲಿ ಗುಪ್ತಚರ ವಿಭಾಗ ಒಂದಿದೆ. ಅಲ್ಲಿ ಇಡೀ ದೇಶದ ಹಣಕಾಸಿನ ಮಾಹಿತಿ ಸಂಗ್ರಹವಾಗಿ ಪರಿಶೀಲನೆಗೊಳಪಡುತ್ತದೆ. ಸಬ್‍ರಿಜಿಸ್ಟ್ರಾರ್ ಕಚೇರಿ, ಕಾರು ಕಂಪನಿಗಳು, ಬ್ಯಾಂಕ್‍ಗಳಲ್ಲಿ ಬೃಹತ್ ಮೊತ್ತದ ಠೇವಣಿ, ಹಣ ವಿತ್‍ಡ್ರಾ ಮಾಡಿದಾಗ ಆ ಮಾಹಿತಿ ಇವರಿಗೆ ಹೋಗುತ್ತದೆ. ಆದಾಯ ತೆರಿಗೆ ರಿಟನ್ರ್ಸ್‍ನಲ್ಲಿ ಅದು ನಮೂದಾಗದೇ ಇದ್ದಾಗ ಸಿಕ್ಕಿಹಾಕಿಕೊಳ್ಳುತ್ತಿರುವುದನ್ನೂ ಗಮನಿಸಬಹುದು. ಇತ್ತೀಚೆಗೆ ಕೇಂದ್ರ ಸರ್ಕಾರವು ತೆರಿಗೆಮೂಲ ವಿಸ್ತರಿಸುವುದಕ್ಕೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅದು ಎಲ್ಲರ ಗಮನಕ್ಕೂ ಬಂದಿದೆ.
ಒಂದು ಸಲ ತೆರಿಗೆ ಜಾಲಕ್ಕೆ ಬಂದರೆ ಮುಂದೆ ಸ್ಥಿರವಾಗಿ ಮುಂದುವರಿಯುತ್ತಾರೆ. ಇಲ್ಲದೇ ಹೋದರೆ ತೆರಿಗೆ ಪಾವತಿಸುವವರು ತೆರಿಗೆ ಪಾವತಿಸುತ್ತಾನೇ ಇರಬೇಕು. ಉಳಿದವರು ಹಾಗೇ ಇದ್ದುಬಿಡುತ್ತಾರೆ. ತೆರಿಗೆ ಹೊರೆಯೂ ಹೆಚ್ಚಾಗಿರುತ್ತದೆ. ಒಂದೊಮ್ಮೆ, ತೆರಿಗೆಮೂಲ ವಿಸ್ತರಣೆಯಾದರೆ ಅಂದರೆ ತೆರಿಗೆ ಪಾವತಿಸುವವರ ಸಂಖ್ಯೆ ಹೆಚ್ಚಾದರೆ ಸಹಜವಾಗಿಯೇ ತೆರಿಗೆ ಪ್ರಮಾಣ ಅಥವಾ ತೆರಿಗೆ ಹೊರೆಯೂ ಕಡಿಮೆಯಾಗುತ್ತದೆ. ತೆರಿಗೆಪಾವತಿಸುವವರ ಸಂಖ್ಯೆ ಹೆಚ್ಚಾದರೆ, ತೆರಿಗೆ ಮೂಲಕ ಸರ್ಕಾರಕ್ಕೆ ಸಲ್ಲುವ ಆದಾಯವೂ ಹೆಚ್ಚಾಗುತ್ತದೆ. ಒಂದೊಮ್ಮೆ ಎಲ್ಲರೂ ತೆರಿಗೆ ಜಾಲದೊಳಕ್ಕೆ ಬಂದ ಬಳಿಕ ಯಾರಿಗೂ ತೆರಿಗೆ ವಂಚಿಸುವ ಮನಸ್ಸಾಗದು. ಒಂದೊಮ್ಮೆ ವಂಚಿಸಿದರೆ ಭಾರಿ ದಂಡ ತೆರಬೇಕಾಗುತ್ತದೆ ಎಂಬ ಭೀತಿಯೂ ಅವರನ್ನು ಕಾಡುತ್ತಿರುತ್ತದೆ. ಒಮ್ಮೆ ತೆರಿಗೆ ಜಾಲಕ್ಕೆ ಒಳಗಾದರೆ, ಅಂಥವರಿಗೆ ಬ್ಯಾಂಕ್‍ಗಳ ಮೂಲಕ ಹಣಕಾಸಿನ ನೆರವು, ಕ್ರೆಡಿಟ್ ಕಾರ್ಡ್ ಮುಂತಾದ ಸೌಲಭ್ಯಗಳು ಸಿಗುತ್ತವೆ. ಇಲ್ಲದೇ ಹೋದರೆ, ಮನೆ ಸಾಲ ಬಿಡಿ ಯಾವ ಸಾಲ ಸಿಗಬೇಕಾದರೂ ಕಷ್ಟ ಪಡಬೇಕಾಗುತ್ತದೆ.
ಈಗಾಗಲೇ ಸರ್ಕಾರ ತೆರಿಗೆ ವಂಚನೆ ತಡೆಯುವುದಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದೆ. ಇದು ವಿಶ್ವಮಟ್ಟದಲ್ಲಿ ಭಾರತದ ಅರ್ಥವ್ಯವಸ್ಥೆಯ ಪ್ರಾಮುಖ್ಯತೆಯನ್ನೂ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸಿದೆ. ಹೀಗಾಗಿ ಈಗ ನಡೆಯುತ್ತಿರುವ ಬೆಳವಣಿಗೆಯನ್ನು ಧನಾತ್ಮಕವಾಗಿಯೇ ಗಮನಿಸಬೇಕಾಗುತ್ತದೆ.
ಸಿಎ ಎನ್.ನಿತ್ಯಾನಂದ,  ಲೆಕ್ಕಪರಿಶೋಧಕರು

ಭಾರತೀಯ ಸೇನೆಗೆ ರಜಪೂತ ಸಾರಥ್ಯ

ಭಾರತೀಯ ಸೇನೆಗೆ ರಜಪೂತ ಸಾರಥ್ಯ

rawatದೇಶದ 27ನೇ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಬಿಪಿನ್ ರಾವತ್ ವರ್ಷಾಂತ್ಯದ ದಿನ ಅಧಿಕಾರ ಸ್ವೀಕರಿಸಿದರು. ಹದಿಮೂರು ಲಕ್ಷ ಸೇನಾ ಸಿಬ್ಬಂದಿ ಹೊಂದಿದ ಬಲಿಷ್ಠ ಸೇನೆಯ ಆಡಳಿತ ಹೊಣೆಗಾರಿಕೆಯನ್ನು ಶನಿವಾರ(ಡಿ.31) ನಿವೃತ್ತರಾದ ಜ.ದಲ್ಬೀರ್ ಸಿಂಗ್ ಸುಹಾಗ್ ಅವರು ಜ.ರಾವತ್‍ಗೆ ಹಸ್ತಾಂತರಿಸಿದರು. ಜ.ಸಿಂಗ್ ಅವರ ನಿವೃತ್ತಿಗೆ ಎರಡು ವಾರ ಬಾಕಿ ಇರುವಾಗ ಕೇಂದ್ರ ಸರ್ಕಾರವು ಈ ಅಚ್ಚರಿಯ ಘೋಷಣೆ ಮಾಡಿತ್ತು. ಈ ನಿರ್ಣಯದ ಹಿಂದೆ ಹಲವು ಬೆಳವಣಿಗೆಗಳಾಗಿರುವುದರ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲಿವೆ.

ಅಂದು ಡಿಸೆಂಬರ್ 16. ಸಂಸತ್ತಿನ ಚಳಿಗಾಲದ ಅಧಿವೇಶನ ಮಧ್ಯಾಹ್ನ 2 ಗಂಟೆಗೆ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿತು. ಅದಾಗಿ ಎರಡು ಗಂಟೆ ಆಗಿರಬಹುದು. ಪ್ರಧಾನಿ ನರೇಂದ್ರ ಮೋದಿ ಅವರು ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಅವರನ್ನು ಕಚೇರಿಗೆ ಕರೆಯಿಸಿಕೊಂಡರು. ತುರ್ತು ಬರುವಂತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಲ್‍ಗೂ ಕರೆ ಹೋಗಿತ್ತು. ಇವರ ನಡುವೆ ಕೆಲ ನಿಮಿಷ ನಡೆದ ಗಂಭೀರ ಮಾತುಕತೆಯ ಬಳಿಕ, ಲೆ.ಜ. ಬಿಪಿನ್ ರಾವತ್ ಮುಂದಿನ ಸೇನಾ ಮುಖ್ಯಸ್ಥರಾಗಿ ನೇಮಕವಾಗಿರುವ ವಿಷಯ ಬಹಿರಂಗವಾಯಿತು.
ವಾಸ್ತವದಲ್ಲಿ ಮೂರು ತಿಂಗಳ ಹಿಂದೆಯೇ ಹೊಸ ಸೇನಾ ಮುಖ್ಯಸ್ಥರ ಆಯ್ಕೆಗೆ ಕಸರತ್ತು ಆರಂಭವಾಗಿತ್ತು. ಆಗ ರಾವತ್ ಅವರನ್ನು ಪುಣೆಯ ಸದರ್ನ್ ಕಮಾಂಡ್‍ನಿಂದ ದೆಹಲಿಗೆ ಕರೆಯಿಸಿಕೊಳ್ಳಲಾಗಿತ್ತು. ರಾವತ್ ಅವರ ಸ್ವವಿವರದ ಕಡತ ಪ್ರಧಾನಮಂತ್ರಿ ಕಚೇರಿಗೆ ತಲುಪಿತ್ತು. ನೇಮಕ ಸಮಿತಿಯ ಅನುಮೋದನಗೆ ಒಟ್ಟು ಮೂರು ಹೆಸರು ತಲುಪಿದ್ದವು. ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ನಿಗ್ರಹದ ವಿಷಯದಲ್ಲಿದ್ದ ಪ್ರತ್ಯಕ್ಷ ಅನುಭವ, ಜತೆಗೆ ದೊವಲ್ ಶಿಫಾರಸು ರಾವತ್ ಅವರ ಸ್ವವಿವರದ ತೂಕವನ್ನು ಹೆಚ್ಚಿಸಿದವು. ರಕ್ಷಣಾ ಇಲಾಖೆಯ ಮಾಹಿತಿ ಪ್ರಕಾರ, ಈ ನೇಮಕ ಘೋಷಣೆಗೆ ಎರಡು ದಿನ ಮೊದಲೇ ರಾವತ್ ಅವರಿಗೆ ಹೊಸ ಹೊಣೆಗಾರಿಕೆಯ ಬಗ್ಗೆ ಸ್ವತಃ ರಕ್ಷಣಾ ಸಚಿವರೇ ವಿವರಿಸಿದ್ದರು. ಪರಿಣಾಮ, ಮೂರು ದಶಕಗಳಿಂದ ಪಾಲನೆಯಾಗುತ್ತಿದ್ದ ಸೇವಾಹಿರಿತನ ಹೊಂದಿದವರಿಗೆ ಸೇನಾಮುಖ್ಯಸ್ಥರ ಹೊಣೆಗಾರಿಕೆ ಎಂಬ ವಾಡಿಕೆ ಕೊನೆಗೊಂಡಿತು. ಇಬ್ಬರು ಹಿರಿಯ ಲೆಫ್ಟಿನೆಂಟ್ ಜನರಲ್‍ಗಳಾದ ಪ್ರವೀಣ್ ಬಕ್ಷಿ ಹಾಗೂ ಪಿ.ಎಂ.ಹ್ಯಾರಿಸ್ ಅವರನ್ನು ಹಿಂದಿಕ್ಕಿ, ಸದ್ಯದ ಸೂಕ್ಷ್ಮ ಪರಿಸ್ಥಿತಿ ನಿಭಾಯಿಸಬಲ್ಲರು ಎಂಬ ಕಾರಣಕ್ಕೆ ರಾವತ್ ಹೆಗಲಿಗೆ ಹೊಣೆಗಾರಿಕೆ ಏರಿತು.
ಇಂಥದ್ದೇ ಸನ್ನಿವೇಶ 1983ರಲ್ಲೂ ಸೃಷ್ಟಿಯಾಗಿತ್ತು. ಅಂದು ಸೇನಾ ಮುಖ್ಯಸ್ಥರನ್ನಾಗಿ ಜನರಲ್ ಅರುಣ್ ಶ್ರೀಧರ್ ವೈದ್ಯ ಅವರನ್ನು ನೇಮಕ ಮಾಡುವ ಸಂದರ್ಭದಲ್ಲಿ ಸೇವಾಹಿರಿತನ ಹೊಂದಿದ್ದ ಲೆ.ಜ. ಎಸ್.ಕೆ.ಸಿನ್ಹಾ ಅವರನ್ನು ಕಡೆಗಣಿಸಲಾಗಿತ್ತು.
ಪ್ರಸ್ತುತ ರಾವತ್ ವಿಚಾರದಲ್ಲಿ ಕೇಂದ್ರ ಸರ್ಕಾರದ ನಡೆ ರಾಜಕೀಯ ಆಕ್ಷೇಪಕ್ಕೆ ಕಾರಣವಾಯಿತು. ಸೇವಾಹಿರಿತನ ಹೊಂದಿದ ಲೆಫ್ಟಿನೆಂಟ್ ಜನರಲ್‍ಗಳಾದ ಪ್ರವೀಣ್ ಬಕ್ಷಿ ಹಾಗೂ ಪಿ.ಎಂ.ಹ್ಯಾರಿಸ್ ಅವರ ಅಸಮಾಧಾನಕ್ಕೂ ಕಾರಣವಾಯಿತು. ಆದರೆ, ಪ್ರಸ್ತುತ ಸನ್ನಿವೇಶದಲ್ಲಿ ಸೇವಾಹಿರಿತನಕ್ಕಿಂತ ದೇಶಕ್ಕೆ ಬೇಕಾಗಿದುದು ಅನುಭವ ಮತ್ತು ಸಾಮಥ್ರ್ಯ. ಅದನ್ನು ಮನಗಂಡೇ ಜನರಲ್ ರಾವತ್ ಅವರಿಂದ ಹೆಚ್ಚಿನ ಫಲಿತಾಂಶ ಬಯಸಿ ಸರ್ಕಾರ ಈ ಹೊಣೆಗಾರಿಕೆಯನ್ನು ಅವರ ಹೆಗಲೇರಿಸಿದೆ ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ.
ರಾವತ್ ವೃತ್ತಿಜೀವನವನ್ನೊಮ್ಮೆ ಅವಲೋಕಿಸಿದರೆ ಅವರ ಸಾಮಥ್ರ್ಯ ಮನವರಿಕೆಯಾಗುತ್ತದೆ. 1978ರ ಡಿಸೆಂಬರ್ 16ರಂದು ಸೇನೆಯ 11ನೇ ಗೂರ್ಖಾ ರೈಫಲ್ಸ್‍ನ 5ನೇ ಬೆಟಾಲಿಯನ್‍ಗೆ ಸೇರ್ಪಡೆಗೊಂಡರು. ಅದೇ ಬೆಟಾಲಿಯನ್‍ನಲ್ಲಿ ಅವರ ತಂದೆಯೂ ಸೇವೆ ಸಲ್ಲಿಸುತ್ತಿದ್ದರು. ಮುಂದೆ ಹತ್ತು ವರ್ಷಗಳ ಕಾಲ ಉಗ್ರರ ಒಳನುಸುಳುವಿಕೆ ತಡೆಯುವ ಅನೇಕ ಕಾರ್ಯಾಚರಣೆಗಳಲ್ಲಿ ಭಾಗಿಯಾದರು. ಉರಿ ಪ್ರದೇಶದಲ್ಲೂ ಒಂದು ಸೇನಾ ಕಂಪನಿಯನ್ನು ಮುನ್ನಡೆಸಿದ್ದರು. ಅದಾಗಿ, ಈಸ್ಟರ್ನ್ ಸೆಕ್ಟರ್‍ನ ವಾಸ್ತವ ಗಡಿರೇಖೆ ಪಹರೆಯ ಇನ್‍ಫಂಟ್ರಿ ಬೆಟಾಲಿಯನನ್ನು, ಕಾಶ್ಮೀರ ಕಣಿವೆ ಪ್ರದೇಶದಲ್ಲಿ 5ನೇ ಸೆಕ್ಟರ್‍ನ ರಾಷ್ಟ್ರೀಯ ರೈಫಲ್ಸ್ ಹಾಗೂ 19ನೇ ಇನ್‍ಫಂಟ್ರಿ ವಿಭಾಗವನ್ನು ಮುನ್ನಡೆಸಿದ್ದರು. ದಿಮಾಪುರ್, ಪುಣೆಯ ಸದರ್ನ್ ಕಮಾಂಡ್‍ನಲ್ಲೂ ವಿವಿಧ ಹೊಣೆಗಾರಿಕೆ ನಿಭಾಯಿಸಿದರು. ಡೆಹ್ರಾಡೂನ್‍ನ ಭಾರತೀಯ ಸೇನಾ ಅಕಾಡೆಮಿಯಲ್ಲಿ ಬೋಧನಾ ವೃತ್ತಿಯನ್ನೂ ಮಾಡಿದ್ದರು. ಸೇನಾ ಕಾರ್ಯಾಚರಣೆ ನಿರ್ದೇಶನಾಲಯದಲ್ಲಿ ಜನರಲ್ ಸ್ಟಾಫ್ ಆಫೀಸರ್ ಗ್ರೇಡ್ 2 ಜವಾಬ್ದಾರಿ, ಮಧ್ಯಭಾರತದಲ್ಲಿ ರ್ಯಾಪಿಡ್‍ನ ಲಾಜಿಸ್ಟಿಕ್ಸ್ ಸಿಬ್ಬಂದಿ ಅಧಿಕಾರಿ, ಸೇನಾಕಾರ್ಯದರ್ಶಿಗಳ ಶಾಖೆಯಲ್ಲಿ ಕರ್ನಲ್ ಸೇನಾ ಕಾರ್ಯದರ್ಶಿ, ಡೆಪ್ಯುಟಿ ಮಿಲಿಟರಿ ಸೆಕ್ರಟರಿ, ಜ್ಯೂನಿಯರ್ ಕಮಾಂಡ್ ವಿಂಗ್‍ನ ಹಿರಿಯ ಬೋಧಕ ಹೀಗೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದರು.
ಕಾಂಗೊದಲ್ಲಿ ಶಾಂತಿಸ್ಥಾಪನೆಯ ಬಹುರಾಷ್ಟ್ರೀಯ ಬ್ರಿಗೇಡ್‍ನ ಏಳನೇ ವಿಭಾಗವನ್ನು ಮುನ್ನಡೆಸಿದ್ದರು. ಅಲ್ಲಿ, ಎರಡು ಬಾರಿ ಅವರಿಗೆ ಫೋರ್ಸ್ ಕಮಾಂಡರ್‍ನ ಸ್ಥಾನ ಸಿಕ್ಕಿತ್ತು. ಇದಾಗಿ, 2015ರಲ್ಲಿ ಮ್ಯಾನ್ಮಾರಿನಲ್ಲಿ ನಡೆದ ಉಗ್ರ ನಿಗ್ರಹ ಕಾರ್ಯಾಚರಣೆಯ ಹೊಣೆಗಾರಿಕೆಯನ್ನು ದಿಮಾಪುರ ಸೇನಾನೆಲೆಯಿಂದ ಯಶಸ್ವಿಯಾಗಿ ನಿರ್ವಹಿಸಿದ್ದರು. ಕಳೆದ ವರ್ಷ ಜನವರಿ ಒಂದರಂದು ಸದರ್ನ್ ಕಮಾಂಡ್‍ನ ಜನರಲ್ ಆಫೀಸ್ ಕಮಾಂಡಿಂಗ್ ಇನ್ ಚೀಫ್ ಹೊಣೆಗಾರಿಕೆ ಹೊತ್ತುಕೊಂಡರು. ತರುವಾಯ ಸೆಪ್ಟೆಂಬರ್ 1ರಿಂದ ಸೇನಾ ಸಿಬ್ಬಂದಿಯ ಉಪಮುಖ್ಯಸ್ಥರ ಹೊಣೆಗಾರಿಕೆ ಅವರನ್ನರಸಿ ಬಂತು. ಹೀಗೆ, ಮೂವತ್ತೇಳು ವರ್ಷಗಳ ವೃತ್ತಿಜೀವನದಲ್ಲಿ ಅವರಿಗೆ ಹಲವು ಸೇನಾ ಪ್ರಶಸ್ತಿ ಪುರಸ್ಕಾರಗಳು ಸಂದಿವೆ.
ರಾವತ್ ಸೈನಿಕ ಹಿನ್ನೆಲೆಯಿಂದಲೇ ಬಂದವರು. ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯ ರಜಪೂತ ಕುಟುಂಬದವರು. ತಂದೆ ಲೆ.ಜ. ಲಚು ಸಿಂಗ್ ರಾವತ್. ಡೆಹ್ರಾಡೂನ್‍ನ ಕ್ಯಾಂಬ್ರಿಯನ್ ಹಾಲ್ ಬೋರ್ಡಿಂಗ್ ಸ್ಕೂಲ್, ಶಿಮ್ಲಾದ ಸೇಂಟ್ ಎಡ್ವರ್ಡ್ ಸ್ಕೂಲ್, ಡೆಹ್ರಾಡೂನ್‍ನ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಆರಂಭದ ಶಿಕ್ಷಣ. ಇಂಡಿಯನ್ ಮಿಲಿಟರಿ ಅಕಾಡೆಮಿ ಸ್ಕೂಲ್‍ನಲ್ಲಿದ್ದಾಗಲೇ ರಾವತ್ ಅವರು `ಸ್ವೋರ್ಡ್ ಆಫ್ ಆನರ್’ ಪುರಸ್ಕೃತರು. ತರುವಾಯ, ವೆಲ್ಲಿಂಗ್ಟನ್‍ನ ರಕ್ಷಣಾ ಸೇವಾ ಸಿಬ್ಬಂದಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದರು. ನಂತರ, ಅಮೆರಿಕದ ಪೋರ್ಟ್ ಲೀವನ್‍ವರ್ತ್‍ನಲ್ಲಿ ಹೈಯರ್ ಕಮಾಂಡ್ ಕೋರ್ಸ್ ಮಾಡಿದರು. 2011ರಲ್ಲಿ ಮಿಲಿಟರಿ-ಮೀಡಿಯಾ ಸ್ಟ್ರಾಟಜಿಕ್ ಸ್ಟಡೀಸ್ ಎಂಬ ವಿಷಯದ ಬಗ್ಗೆ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಮೀರತ್‍ನ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು. ಹಾಗೆಯೇ ರಾವತ್ ಅವರು ರಾಷ್ಟ್ರೀಯ ಭದ್ರತೆ ಹಾಗೂ ನಾಯಕತ್ವದ ವಿಷಯವಾಗಿ ಅನೇಕ ಲೇಖನಗಳನ್ನು ಬರೆದಿದ್ದು ಅವುಗಳು ದೇಶ ವಿದೇಶಗಳ ಹಲವು ಪ್ರತಿಷ್ಠಿತ ಪತ್ರಿಕಾ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.
ವೃತ್ತಿಜೀವನದಲ್ಲಿ `ಮ್ಯಾನ್ ಆಫ್ ಆ್ಯಕ್ಷನ್’ ಎಂದೇ ಪ್ರಸಿದ್ಧರಾಗಿರುವ ಜನರಲ್ ರಾವತ್ ಅವರ ಎದುರು ಸದ್ಯ ಗಂಭೀರ ಸವಾಲುಗಳಿವೆ. ಕಳೆದ ತಿಂಗಳು ಪಾಕಿಸ್ತಾನದಲ್ಲೂ ಸೇನಾ ಹೊಣೆಗಾರಿಕೆಯಲ್ಲಿ ಬದಲಾವಣೆಯಾಗಿದ್ದು, ಜಮ್ಮು ಕಾಶ್ಮೀರದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡಿಸುವ ಪ್ರಯತ್ನಗಳೂ ಹೆಚ್ಚಾಗಿವೆ. ಇದಲ್ಲದೇ ಚೀನಾದ ಬೆದರಿಕೆ ಇದ್ದೇ ಇದೆ. ಭಯೋತ್ಪಾದನೆ ವಿಷಯದಲ್ಲಿ ಕಟ್ಟೆಚ್ಚರ ವಹಿಸಬೇಕಾದ ಸವಾಲೂ ಅವರ ಮೇಲಿದೆ. ಪ್ರಧಾನಿ ಮೋದಿ ತಮ್ಮ ಮೇಲೆ ನಂಬಿಕೆಯಿರಿಸಿ ಕೊಡಮಾಡಿದ ಈ ಹೊಣೆಯನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದು ಸದ್ಯದ ಕುತೂಹಲ.