ದೆಹಲಿಯ ಆಡಳಿತಕ್ಕೆ ಹಳೇ ಐಎಎಸ್ ಅಧಿಕಾರಿ

anil-baijal-6ರಾಷ್ಟ್ರ ರಾಜಧಾನಿ ಪ್ರದೇಶ ದೆಹಲಿ ಒಂದು ರಾಜ್ಯ ಎಂಬುದು ನಿಜವಾದರೂ ಅದಕ್ಕೆ ಪೂರ್ಣ ಪ್ರಮಾಣದ ರಾಜ್ಯದ ಸ್ಥಾನಮಾನವಿಲ್ಲ. ವಿಧಾನಸಭೆ ಇದ್ದರೂ ಆಡಳಿತದ ಪೂರ್ಣ ಹೊಣೆ ರಾಜ್ಯ ಸರ್ಕಾರದ್ದಲ್ಲ. ಆರಂಭದಿಂದಲೂ ಅಂದರೆ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಿಂದಲೂ ಇದು ಹೀಗೆಯೇ ಮುಂದುವರಿದಿದೆ. ಆರಂಭದಲ್ಲಿ ‘ಪಾರ್ಟ್ -ಸಿ’ ರಾಜ್ಯವಾಗಿ ಪರಿಗಣಿಸಲ್ಪಟ್ಟ ದೆಹಲಿ ನೇರವಾಗಿ ರಾಷ್ಟ್ರಪತಿ ಆಡಳಿತಕ್ಕೆ ಒಳಪಟ್ಟಿತ್ತು. ಮೊದಲ ರಾಜ್ಯ ಸರ್ಕಾರ(1952) ಅಸ್ತಿತ್ವಕ್ಕೆ ಬಂದಾಗ ಅದಕ್ಕೆ ಸೀಮಿತ ಶಾಸನಾತ್ಮಕ ಅಧಿಕಾರವಿತ್ತು. ಉಳಿದೆಲ್ಲ ಅಧಿಕಾರವೂ ದೆಹಲಿಯ ಮುಖ್ಯ ಆಯುಕ್ತರ ಕೈಯಲ್ಲಿತ್ತು. ದೆಹಲಿ ಸರ್ಕಾರದ ಪಾತ್ರ ಸಲಹೆ ನೀಡುವುದಕ್ಕಷ್ಟೇ ಸೀಮಿತವಾಗಿತ್ತು. ತರುವಾಯ, 1956ರಲ್ಲಿ ಭಾಷಾವಾರು ಪ್ರಾಂತ್ಯ ರಚನೆಯಾದಾಗ ದೆಹಲಿಗೆ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ಸಿಕ್ಕಿತು. 1966ರ ದೆಹಲಿ ಆಡಳಿತ ಕಾಯ್ದೆ ಪ್ರಕಾರ 56 ಚುನಾಯಿತ ಹಾಗೂ ರಾಷ್ಟ್ರಪತಿಯವರಿಂದ ನೇರ ನಾಮನಿರ್ದೇಶನ ಹೊಂದಿದ ಐವರು ಸದಸ್ಯರ ಶಾಸನಸಭೆ ರಚಿಸುವುದಕ್ಕೆ ಅವಕಾಶವಾಯಿತು. ಮುಖ್ಯ ಆಯುಕ್ತರ ಬದಲಾಗಿ ಲೆಫ್ಟಿನೆಂಟ್ ಗವರ್ನರ್ (ಉಪರಾಜ್ಯಪಾಲ) ಬಂದರು. ಈ ನೇಮಕಕ್ಕೆ ಸಂವಿಧಾನದ ಅನುಚ್ಛೇದ 239ರಲ್ಲಿ ಅವಕಾಶ ಕಲ್ಪಿಸಲಾಗಿದೆ. 1993ರಲ್ಲಿ ದೆಹಲಿಗೆ ರಾಜ್ಯದ ಸ್ಥಾನಮಾನ ಸಿಕ್ಕಿ, ವಿಧಾನಸಭೆ-ಮುಖ್ಯಮಂತ್ರಿ ಹೊಂದುವುದು ಸಾಧ್ಯವಾಯಿತು. ಆದಾಗ್ಯೂ, ಮುಖ್ಯಮಂತ್ರಿಯು ಅಧಿಕಾರವನ್ನು ಅಲ್ಲಿನ ಉಪ ರಾಜ್ಯಪಾಲರ ಜತೆಗೆ ಹಂಚಿಕೊಳ್ಳಬೇಕು. ವಿಶೇಷವಾಗಿ ಮುಖ್ಯ ಕಾರ್ಯದರ್ಶಿ, ಪೊಲೀಸ್ ಆಯುಕ್ತ, ಗೃಹ ಕಾರ್ಯದರ್ಶಿ, ಭೂ ಕಾರ್ಯದರ್ಶಿ ನೇಮಕ ಹಾಗೂ ಅವರ ಕೆಲಸ ಕಾರ್ಯ ನಿರ್ವಹಣೆ ಗಮನಿಸುವ ಹೊಣೆ ಉಪರಾಜ್ಯಪಾಲರದ್ದು. ಇದರಲ್ಲಿ ಮುಖ್ಯಮಂತ್ರಿ ಹಸ್ತಕ್ಷೇಪ ಮಾಡುವಂತಿಲ್ಲ. ದೆಹಲಿ ರಾಷ್ಟ್ರದ ಶಕ್ತಿಕೇಂದ್ರವೂ ಆಗಿರುವುದರಿಂದ, ದೇಶದ ಸುರಕ್ಷತೆ, ಭದ್ರತೆಯ ದೃಷ್ಟಿ ಯಿಂದಲೂ ಇಂತಹದೊಂದು ಅಧಿಕಾರ ಹಂಚಿಕೆ ಅನಿವಾರ್ಯ ಎಂಬುದು ಇದರ ಹಿಂದಿನ ತರ್ಕ.

ಕೇಂದ್ರದಲ್ಲಿ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿದ ಬಳಿಕ ನಡೆದ ದೆಹಲಿ ಚುನಾವಣೆಯಲ್ಲಿ ಅದಾಗ ತಾನೆ ಹುಟ್ಟಿಕೊಂಡ ಆಮ್ ಆದ್ಮಿ ಪಕ್ಷ ಗೆಲುವು ಸಾಧಿಸಿ, ರಾಜಕೀಯ ಅನನುಭವಿ ಅರವಿಂದ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಅಲ್ಲಿಂದೀಚೆಗೆ ದೆಹಲಿಯಲ್ಲಿ ನಡೆದುದು ಅಕ್ಷರಶಃ ಹಗ್ಗಜಗ್ಗಾಟ. ಅದೂ ಉಪರಾಜ್ಯಪಾಲ ನಜೀಬ್ ಜಂಗ್ ಅವರ ಜತೆ. ಎಷ್ಟೆಂದರೆ ಸಾಂವಿಧಾನಿಕ ಬಿಕ್ಕಟ್ಟಿನ ತನಕ ತಲುಪಿತ್ತು ಈ ಕುಸ್ತಿ. ಕೊನೆಗೆ, ಕಳೆದ ತಿಂಗಳ 22ರಂದು ನಜೀಬ್ ಜಂಗ್ ಅವರು ಇದ್ದಕ್ಕಿದ್ದಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾಗಿ ತಿಳಿಸಿದರು. ಇದಕ್ಕೂ ಮುನ್ನ ಅವರು ಪ್ರಧಾನಿ ಸಚಿವಾಲಯಕ್ಕೆ ತೆರಳಿ ಪ್ರಧಾನಿ ಜತೆಗೆ ಮಾತುಕತೆ ನಡೆಸಿದ್ದರು. ಹಾಗೆ, ಕಳೆದ ತಿಂಗಳ ಅಂತ್ಯಕ್ಕೆ (ಡಿ.30) ದೆಹಲಿಯಲ್ಲಿ ಹೊಸ ಉಪರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದವರು ಅನಿಲ್ ಬೈಜಲ್.

ದೆಹಲಿಯ ಉಪರಾಜ್ಯಪಾಲರಾಗಿ ನೇಮಕವಾದವರು ಮತ್ತು ಅವರ ಹೊಣೆಗಾರಿಕೆ ಬಗ್ಗೆ ಹೇಳುವ ಮುನ್ನ, ಇಷ್ಟು ಪೀಠಿಕೆ ನೀಡಿದರಷ್ಟೇ ವಿಷಯ ಸರಳವಾಗಿ ಅರ್ಥವಾದೀತು. ಇನ್ನೊಂದು ವಿಶೇಷ ಅಂದರೆ ದೆಹಲಿಯ ಉಪರಾಜ್ಯಪಾಲರಾದವರ ಪೈಕಿ ಬಹುತೇಕರು ಐಎಎಸ್ ಅಧಿಕಾರಿಗಳಾಗಿದ್ದವರು. ಈಗ 21ನೇ ಉಪರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿರುವ ಅನಿಲ್ ಬೈಜಲ್ ಕೂಡ ನಿವೃತ್ತ ಐಎಎಸ್ ಅಧಿಕಾರಿ. ಎಪ್ಪತ್ತು ವರ್ಷ ವಯಸ್ಸಿನ ಅನಿಲ್ ಬೈಜಲ್, 1969ರ ಬ್ಯಾಚಿನ ಕೇಂದ್ರಾಡಳಿತ ಪ್ರದೇಶ ಕೇಡರ್ನ ಐಎಎಸ್ ಅಧಿಕಾರಿ. ಅನಿಲ್ ಬೈಜಲ್ ಮೂವತ್ತೇಳು ವರ್ಷದ ಸೇವಾವಧಿಯಲ್ಲಿ ಗೃಹ ಸಚಿವಾಲಯವಲ್ಲದೇ, ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರಾಗಿ, ಅಂಡಮಾನ್ ನಿಕೋಬಾರ್ನ ಮುಖ್ಯಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಇಂಡಿಯನ್ ಏರ್ಲೈನ್ಸ್ನ ಚೇರ್ಮನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದ ಬೈಜಲ್, ಆ ಸಂಸ್ಥೆಯನ್ನು ನಷ್ಟದಿಂದ ಮೇಲೆತ್ತಲು ಬಹಳ ಶ್ರಮವಹಿಸಿದ್ದರು. ಇದಲ್ಲದೇ, ದೆಹಲಿಯ ತೆರಿಗೆ ಮತ್ತು ಅಬಕಾರಿ ಮಾರಾಟ ಆಯುಕ್ತರಾಗಿ, ಗೋವಾದ ಅಭಿವೃದ್ಧಿ ಆಯುಕ್ತರ ಹೊಣೆಗಾರಿಕೆಯನ್ನೂ ನಿಭಾಯಿಸಿದ್ದರು. ನೇಪಾಳದಲ್ಲಿ ಭಾರತದ ನೆರವು ಯೋಜನೆಯ ಕೌನ್ಸಿಲರ್ ಇನ್ಚಾರ್ಜ್ ಆಗಿದ್ದ ಅವರು, ಮನಮೋಹನ್ ಸಿಂಗ್ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಜಾರಿಗೊಳಿಸಿದ 60,000 ಕೋಟಿ ರೂಪಾಯಿ ವೆಚ್ಚದ ಜವಾಹರಲಾಲ್ ನೆಹರೂ ನ್ಯಾಷನಲ್ ಅರ್ಬನ್ ರಿನ್ಯೂವೆಲ್ ಮಿಷನ್ (ಜೆಎನ್ಎನ್ಯುುಆರ್ಎಂ) ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಪ್ರಸಾರ ಭಾರತಿಯ ಸಿಇಒ ಆಗಿಯೂ ಹಲವು ಬಹುಮುಖ್ಯ ನಿರ್ಣಯಗಳನ್ನು ಅವರು ತೆಗೆದುಕೊಂಡಿದ್ದರು.

ಅನಿಲ್ ಬೈಜಲ್ ಅವರು ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಸರ್ಕಾರವಿದ್ದಾಗ 2004ರ ಫೆಬ್ರವರಿಯಲ್ಲಿ ಗೃಹ ಕಾರ್ಯದರ್ಶಿಯಾಗಿ ನೇಮಕವಾಗಿದ್ದರು. ಆದರೆ, ಅದೇ ವರ್ಷ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಯುಪಿಎ ಗೆಲುವು ಸಾಧಿಸಿ ಅಧಿಕಾರ ಚುಕ್ಕಾಣಿ ಹಿಡಿದಾಗ, ಅವರನ್ನು ಅದೇ ವರ್ಷ ಜುಲೈ 1ರಂದು ನಾಗರಿಕ ವಿಮಾನಯಾನ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಯಿತು. ಕೊನೆಗೆ 2006ರ ಅಕ್ಟೋಬರ್ನಲ್ಲಿ ನಗರಾಭಿವೃದ್ಧಿ ಕಾರ್ಯದರ್ಶಿಯಾಗಿ ನಿವೃತ್ತರಾಗುವ ವೇಳೆಗೆ ಎಂಎಂ ಕುಟ್ಟಿ ಅವರು ಜಂಟಿ ಕಾರ್ಯದರ್ಶಿಯಾಗಿ ನಗರಾಭಿವೃದ್ಧಿ ಸಚಿವಾಲಯಕ್ಕೆ ಸೇರ್ಪಡೆಗೊಂಡಿದ್ದರು. ಪ್ರಸ್ತುತ, ಎಂಎಂ ಕುಟ್ಟಿ ದೆಹಲಿಯ ಮುಖ್ಯಕಾರ್ಯದರ್ಶಿಯಾಗಿರುವುದು ವಿಶೇಷ.

ನಿವೃತ್ತಿಯ ಬಳಿಕ ವಿವೇಕಾನಂದ ಇಂಟರ್ನ್ಯಾಷನಲ್ ಫೌಂಡೇಷನ್ನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು ಬೈಜಲ್. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಈ ಫೌಂಡೇಷನ್ನ ಸಂಸ್ಥಾಪಕ ನಿರ್ದೇಶಕರು. ಪ್ರಧಾನ ಮಂತ್ರಿಯವರ ಪ್ರಿನ್ಸಿಪಲ್ ಸೆಕ್ರಟರಿ, ಹೆಚ್ಚುವರಿ ಮುಖ್ಯಕಾರ್ಯದರ್ಶಿ ಮುಂತಾದವರು ಕೂಡ ಇದೇ ಫೌಂಡೇಷನ್ನಲ್ಲಿ ಕೆಲಸ ಮಾಡಿದವರೆಂಬುದು ವಿಶೇಷ.

ವಿವೇಕಾನಂದ ಫೌಂಡೇಷನ್ ಕೆಲಸಕ್ಕೆ ಹೊರತಾಗಿ, ಬೈಜಲ್ ಅವರು ಐಡಿಎಫ್ ಬ್ಯಾಂಕ್, ಫ್ಯೂಚರ್ ಮಾರ್ಕೆಟ್ ನೆಟ್ವರ್ಕ್ಸ್, ಅಗ್ರೆ ಡೆವಲಪರ್ಸ್, ಐಟಿಸಿ ಫುಡ್ಸ್, ಡಿಎಲ್ಎಫ್ ಪ್ರಮೆರಿಕ ಲೈಫ್ ಇನ್ಶೂರೆನ್ಸ್, ಅರ್ಬನ್ ಸ್ಪೇಸ್ ಕನ್ಸಲ್ಟಂಟ್ಸ್, ಅಪ್ನಾ ಅಧಿಕಾರ್ ಲೀಗಲ್ ಸರ್ವೀಸಸ್, ಬೆಂಗಳೂರು ಮೆಟ್ರೋ ರೈಲ್ ಕಾರ್ಪೆರೇಷನ್ ಸೇರಿ ಹಲವು ಕಾರ್ಪೆರೇಟ್ ಸಂಸ್ಥೆಗಳ ಆಡಳಿತ ಮಂಡಳಿಯಲ್ಲಿ ಸಲಹೆಗಾರರಾಗಿ, ಪದಾಧಿಕಾರಿ ಯಾಗಿ, ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದಾರೆ. ಸದ್ಯದ ಅವರ ನೇಮಕ ರಾಜಕೀಯ ವಾಗಿ ಹೆಚ್ಚು ಮಹತ್ವ ಪಡೆದುಕೊಳ್ಳುವಂಥದ್ದು. ಪ್ರಧಾನಮಂತ್ರಿ ನರೇಂದ್ರ ಮೋದಿ ಆಪ್ತ ಬಳಗದಲ್ಲಿರುವ ಬೈಜಲ್ ಅವರು, ಸದ್ಯದ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾರೆ ಎಂಬ ಕುತೂಹಲವಿದೆ. ಈಗಾಗಲೇ ದೆಹಲಿಯ ಸ್ಥಳೀಯಾಡಳಿತಕ್ಕೆ ಚುರುಕು ಮುಟ್ಟಿಸಿರುವ ಅವರು, ಮುಂದಿನವಾರ ಮೊದಲ ವಿಧಾನಸಭಾ ಅಧಿವೇಶನದಲ್ಲಿ ಭಾಗಿಯಾಗಲಿದ್ದಾರೆ. ದೆಹಲಿಯ ರಾಜಕಾರಣ ಅವರಿಗೆ ಹೊಸತಲ್ಲ. ಅಲ್ಲಿನ ಅಧಿಕಾರಿವರ್ಗ ಹಾಗೂ ರಾಜಕಾರಣಿಗಳೂ ಹೊಸಬರಲ್ಲ. ಹೀಗಾಗಿ, ಭವಿಷ್ಯದಲ್ಲಿ ಎಎಪಿ ನಾಯಕರು ಜಂಗ್ ಅವಧಿಯಂತೆ ಬೈಜಲ್ ಅವಧಿಯಲ್ಲೂ ನಿದ್ರಾರಹಿತ ದಿನಗಳನ್ನು ನೋಡಬೇಕಾಗಿ ಬಂದರೂ ಅಚ್ಚರಿಯಿಲ್ಲ ಎನ್ನುತ್ತಿದೆ ರಾಜಕೀಯ ಪಂಡಿತರ ಚಾವಡಿ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡುವೆ ಹಗ್ಗಜಗ್ಗಾಟವೇರ್ಪಡದಂತೆ, ಸಮರ್ಪಕ ಕೊಂಡಿಯಾಗಿ ಕಾರ್ಯನಿರ್ವಹಿಸುವ ದೊಡ್ಡ ಸವಾಲು ಅವರೆದುರಿಗಿದೆ.

ಬೈಜಲ್ ಅವರು ಅಲಹಾಬಾದ್ ಯೂನಿವರ್ಸಿಟಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಈಸ್ಟ್ ಆನ್ಗ್ಲಿಯಾ ಯೂನಿರ್ವಸಿಟಿಯಿಂದ ಅಭಿವೃದ್ಧಿ ಅರ್ಥಶಾಸ್ತ್ರದಲ್ಲಿ ಮತ್ತೊಂದು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇಷ್ಟು ಬಿಟ್ಟರೆ, ಅವರ ವೈಯಕ್ತಿಕ ವಿಚಾರಗಳು ಹೆಚ್ಚು ಲಭ್ಯವಿಲ್ಲ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s