ಟ್ಯಾಗ್: ವಿಜಯ್ ಬಹುಗುಣ

ಬಂಡಾಯ ಬಲ ತಂದೀತೆ?

rita-bahuguna-amit-shahಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಸನ್ನಿಹಿತವಾಗುತ್ತಿದೆ. ರಾಜಕೀಯ ಬೆಳವಣಿಗೆಗಳು ಚುರುಕಾಗಿದ್ದು, ಪಕ್ಷಾಂತರಪರ್ವದ ಅಧ್ಯಾಯವೂ ಶುರುವಾಗಿದೆ. ಆಡಳಿತಾರೂಢ ಸಮಾಜವಾದಿ ಪಕ್ಷ ಯಾದವೀಕಲಹದಿಂದ ಸುದ್ದಿಯಾಗಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲೂ ದಿಢೀರ್ ಬೆಳವಣಿಗೆಗಳು ನಡೆಯುತ್ತಿವೆ. ರಾಜ್ಯ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷೆ ರೀಟಾ ಬಹುಗುಣ ಜೋಶಿ ಅವರು ಪಕ್ಷ ಹಾಗೂ ಲಖನೌ ಕಂಟೋನ್ಮೆಂಟ್ ಕ್ಷೇತ್ರದ ಶಾಸಕಿ ಸ್ಥಾನಕ್ಕೆ ರಾಜೀನಾಮೆ ನೀಡಿ ಗುರುವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ಬೆಳವಣಿಗೆ ಇಡೀ ದೇಶದ ಗಮನಸೆಳೆದಿತ್ತು. ಬಿಜೆಪಿ ಸೇರಿದ ಬಳಿಕ ರೀಟಾ, ‘ಗಡಿ ನಿಯಂತ್ರಣ ರೇಖೆ ದಾಟಿ ಪಾಕ್ ಆಕ್ರಮಿತ ಪ್ರದೇಶದಲ್ಲಿದ್ದ ಉಗ್ರನೆಲೆಗಳ ಮೇಲೆ ಭಾರತೀಯ ಸೇನೆ ಸರ್ಜಿಕಲ್ ದಾಳಿ ನಡೆಸಿದ್ದನ್ನು ಸಂದೇಹದಿಂದ ಪ್ರಶ್ನಿಸುವ ಮೂಲಕ ಕಾಂಗ್ರೆಸ್ ಆ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಂಡಿತು. ಭಾರತೀಯ ಸೇನೆ ಪಾಕಿಸ್ತಾನಕ್ಕೆ ಸಮರ್ಪಕವಾದ ಅದರದ್ದೇ ಧಾಟಿಯ ಉತ್ತರ ನೀಡಿತು ಎಂದು ಇಡೀ ದೇಶವೇ ಸಂಭ್ರಮಿಸುತ್ತಿತ್ತು. ನಾನೂ ಬಹಳ ಸಂಭ್ರಮಪಟ್ಟಿದ್ದೆ. ಆದರೆ, ಕಾಂಗ್ರೆಸ್ನ ಹಿರಿಯ ನಾಯಕರ ಪ್ರಶ್ನೆಗಳನ್ನು ಕೇಳಿ ಬಹಳ ದುಃಖವಾಯಿತು. ಪ್ರಧಾನಮಂತ್ರಿಯವರನ್ನು ‘ರಕ್ತದ ವ್ಯಾಪಾರಿ’ ಎಂದು ರಾಹುಲ್ ಗಾಂಧಿ ಹೇಳಿದ್ದನ್ನು ಕೇಳಿ ದೇಶ ತಳಮಳಗೊಂಡಿತ್ತು. ರಾಹುಲ್ ಬೇಜವಾಬ್ದಾರಿಯಿಂದಾಗಿ ಪಕ್ಷಕ್ಕೆ ಹಾನಿಯಾಗುತ್ತಿದೆ. ಜನ ಅವರನ್ನು ತಿರಸ್ಕರಿಸುತ್ತಿದ್ದಾರೆ. ಚುನಾವಣಾ ನಿರ್ವಾಹಕ(ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್)ನೊಬ್ಬ ನಾಯಕನ ಸ್ಥಾನವನ್ನು ಭರ್ತಿ ಮಾಡಲಾರ’ ಎಂದು ಹೇಳಿದ್ದರು.

ಇದಕ್ಕೆ ಪೂರಕವಾಗಿ, ‘ಈ ಬೆಳವಣಿಗೆ ಕಾಂಗ್ರೆಸ್ ಅಂಗಳದಲ್ಲಿ ಬಿಜೆಪಿ ನಡೆಸಿದ ‘ಸರ್ಜಿಕಲ್ ದಾಳಿ’ಯಾಗಿದ್ದು, ಬ್ರಾಹ್ಮಣ ಮತದಾರರನ್ನು ಸೆಳೆಯುವ ಅದರ ಪ್ರಯತ್ನ ಈ ಮೂಲಕ ಸಫಲವಾಗಿದೆ’ ಎಂದೇ ರಾಜಕೀಯ ಚಾವಡಿಯಲ್ಲಿ ವಿಶ್ಲೇಷಿಸಲಾಗುತ್ತಿದೆ. ಹೆಚ್ಚು ಕಡಿಮೆ ಎರಡೂವರೆ ದಶಕ ಕಾಲ ಕಾಂಗ್ರೆಸ್ನಲ್ಲಿ ವಿವಿಧ ಹೊಣೆಗಾರಿಕೆ ನಿಭಾಯಿಸಿದ ರೀಟಾ ನಿರ್ಗಮನ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿರುವುದು ವಾಸ್ತವ. ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಸಜ್ಜಾಗಿದ್ದ ಕಾಂಗ್ರೆಸ್ ಒಂದಷ್ಟು ಹವಾ ಕಾಯ್ದುಕೊಳ್ಳುತ್ತಿದೆ ಎನ್ನುವ ಹೊತ್ತಿಗೆ ಪ್ರಮುಖ ನಾಯಕರಲ್ಲೊಬ್ಬರಾದ ರೀಟಾ ಬಹುಗುಣ ಹೊರಬಿದ್ದಿದ್ದಾರೆ. ಪರಿಣಾಮ ನೆಹರು-ಗಾಂಧಿ ಕುಟುಂಬದ ತವರಿನಲ್ಲೆ ಪಕ್ಷಕ್ಕೆ ಭಾರಿ ಹೊಡೆತಬಿದ್ದಂತಾಗಿದೆ. ರೀಟಾ ಅವರ ಪಕ್ಷಾಂತರದ ಹಿನ್ನೆಲೆಯಲ್ಲೂ ಜಾತಿ ರಾಜಕಾರಣದ ನಡೆಯನ್ನು ಸ್ಪಷ್ಟವಾಗಿಯೇ ಗುರುತಿಸಬಹುದು.

ಉತ್ತರಪ್ರದೇಶದ ರಾಜಕೀಯ ಇತಿಹಾಸ ಗಮನಿಸಿದರೆ 1989ರಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ಗೆ ಪುನಃ ಅಲ್ಲಿ ಬೇರೂರುವುದಕ್ಕೆ ಬೇಕಾದ ಗಟ್ಟಿ ನಾಯಕತ್ವ ಇದುವರೆಗೂ ಸಿಕ್ಕಿಲ್ಲ. 1980ರ ದಶಕದ ಕೊನೆಗೆ ಆರಂಭವಾದ ಮಂಡಲ-ಮಂದಿರ ರಾಜಕೀಯಕ್ಕೆ ಹೊಂದಿಕೊಳ್ಳುವುದು ಅದಕ್ಕೆ ಸಾಧ್ಯವಾಗಲಿಲ್ಲ. ಇದಾಗಿ, ಕಾಂಗ್ರೆಸ್ ಮುನ್ನಡೆಸುವ ಹೊಣೆಗಾರಿಕೆ ಹಲವರ ಹೆಗಲೇರಿತು. 2007ರಲ್ಲಿ ಸಲ್ಮಾನ್ ಖುರ್ಷಿದ್ ಅವರಿಂದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಹೊಣೆಗಾರಿಕೆಯನ್ನು ರೀಟಾ ಬಹುಗುಣ ಜೋಶಿ ಹೊತ್ತುಕೊಂಡರು. ಅದಾಗಲೇ ಅವರು ರಾಜಕೀಯ ಪ್ರವೇಶಿಸಿ ಒಂದೂವರೆ ದಶಕದ ಮೇಲಾಗಿತ್ತು. 1995-2000 ಅವಧಿಯಲ್ಲಿ ಅವರು ಅಲಹಾಬಾದ್ನ

ಮೇಯರ್ ಆಗಿದ್ದರು. ತದನಂತರ ರಾಷ್ಟ್ರೀಯ ಮಹಿಳಾ ಸಮಿತಿಯ ಉಪಾಧ್ಯಕ್ಷರಾಗಿದ್ದರು. 2003ರಿಂದ ಅಖಿಲ ಭಾರತ ಮಹಿಳಾ ಕಾಂಗ್ರೆಸ್ನ ಅಧ್ಯಕ್ಷರಾಗಿದ್ದರು. 2007ರಲ್ಲಿ ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನದ ಹೊಣೆಗಾರಿಕೆ ಬಂದಾಗ ಅದನ್ನು ಸಮರ್ಥವಾಗಿಯೇ ನಿಭಾಯಿಸಲು ಪ್ರಯತ್ನಿಸಿದರು. ರೀಟಾ ಬ್ರಾಹ್ಮಣರೆಂಬ ಕಾರಣಕ್ಕೆ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಾಗಿತ್ತು. ಮೇಲ್ವರ್ಗದ ಮತದಾರರನ್ನು ಒಗ್ಗೂಡಿಸುವ ಉದ್ದೇಶ ಇದರ ಹಿಂದೆ ಅಡಗಿತ್ತು. ಆದರೆ, ಆ ಕೆಲಸದಲ್ಲಿ ರೀಟಾ ಯಶಸ್ವಿಯಾಗಲಿಲ್ಲ ಎನ್ನುವುದು 2012ರ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಬಹಿರಂಗವಾಗಿತ್ತು. 403 ಸ್ಥಾನಗಳ ಪೈಕಿ 28 ಸ್ಥಾನಗಳಲ್ಲಷ್ಟೇ ಕಾಂಗ್ರೆಸ್ ಗೆಲುವು ಕಂಡಿತ್ತು. ‘ರಾಹುಲ್ ಗಾಂಧಿ 48 ದಿನಗಳ ಅವಧಿಯಲ್ಲಿ 211 ಸಾರ್ವಜನಿಕ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ ಪರಿಣಾಮ ಇಷ್ಟಾದರೂ ಸೀಟು ಗೆದ್ದೆವು’ ಎಂಬುದು ಕಾಂಗ್ರೆಸ್ ನಾಯಕರ ವಿಶ್ಲೇಷಣೆ. ಆದಾಗ್ಯೂ, 2009ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಲ್ಪಮಟ್ಟಿನ ಯಶಸ್ಸು ಸಾಧಿಸಿತ್ತು. ಆದರೆ, 2014ರಲ್ಲಿ ತೀವ್ರ ಮುಖಭಂಗಕ್ಕೀಡಾಯಿತು. ಏತನ್ಮಧ್ಯೆ 2012ರಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಿರ್ಮಲ್ ಖತ್ರಿ ಅವರನ್ನು ನೇಮಕ ಮಾಡಿದಾಗ, ತಾನು ಮೂಲೆಗುಂಪಾಗುತ್ತಿದ್ದೇನೆ ಎಂಬ ಭಾವನೆ ರೀಟಾಗೆ ಕಾಡಿದ್ದರೆ ಅಚ್ಚರಿಯೇನಲ್ಲ. ಇದರ ಜತೆಗೆ, ದೆಹಲಿಯಲ್ಲಿ ಮೂರು ಅವಧಿಗೆ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್ರನ್ನು ಇತ್ತೀಚೆಗೆ ಉತ್ತರಪ್ರದೇಶ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಕರೆತರುವ ಪ್ರಸ್ತಾಪ ಬಂದಾಗ ಜಾತಿ ರಾಜಕಾರಣದ ಹೊಗೆ ಇನ್ನಷ್ಟು ದಟ್ಟವಾಗಿ ಹಬ್ಬಿತು. ಶೀಲಾ ದೀಕ್ಷಿತ್ ಅವರ ರಾಜಕೀಯ ಟ್ರ್ಯಾಕ್ ರೆಕಾರ್ಡ್ ಚೆನ್ನಾಗಿದ್ದ ಹಿನ್ನೆಲೆಯಲ್ಲಿ ಹಾಗೂ ಜಾತಿಯಲ್ಲಿ ಬ್ರಾಹ್ಮಣರಾಗಿದ್ದ ಕಾರಣ ಅವರು ಸಹಜವಾಗಿಯೇ ಮುನ್ನೆಲೆಗೆ ಬಂದಿದ್ದರು. ಇನ್ನೊಂದೆಡೆ, ಬಹುಜನ ಸಮಾಜ ಪಕ್ಷ ಸತೀಶ್ ಮಿಶ್ರಾರನ್ನು ಮುನ್ನೆಲೆಯಲ್ಲಿ ನಿಲ್ಲಿಸಿದೆ. 2007ರಲ್ಲಿ ಎಲ್ಲ ಜಾತಿಗಳ ವೋಟ್ಬ್ಯಾಂಕ್ ನಿರ್ವಣವಾಗಿ, ಕಡಿಮೆ ಪ್ರಮಾಣದಲ್ಲಿದ್ದ ಬ್ರಾಹ್ಮಣರ ಮತಬ್ಯಾಂಕ್ ನಿರ್ಣಾಯಕವಾಗಿತ್ತು. ಹೀಗಾಗಿ ಈಗ ಅದನ್ನು ತಮ್ಮೆಡೆಗೆ ಸೆಳೆಯಲು ಎಲ್ಲ ಪಕ್ಷಗಳು ಕಸರತ್ತು ನಡೆಸುತ್ತಿವೆ (ವಿಶೇಷ ಅಂದರೆ ಎನ್.ಡಿ.ತಿವಾರಿ ಅಧಿಕಾರಾವಧಿ ನಂತರ(1989)ದಲ್ಲಿ ಬ್ರಾಹ್ಮಣ ಸಮುದಾಯದವರು ಮುಖ್ಯಮಂತ್ರಿ ಪದವಿಗೇರಿಲ್ಲ). ರಾಜಕೀಯ ಮಹತ್ವಾಕಾಂಕ್ಷಿಯಾಗಿದ್ದ ರೀಟಾ ಈ ಬೆಳವಣಿಗೆಗಳಿಂದಾಗಿ ಸಹಜವಾಗಿಯೇ ನೊಂದುಕೊಂಡರು, ಚುನಾವಣಾ ಸಭೆಗಳಿಗೆ ಗೈರುಹಾಜರಾಗತೊಡಗಿದರು. ಕೊನೆಗೆ ಸಹೋದರ ವಿಜಯ್ ಬಹುಗುಣ ಅವರ ಹಾದಿಯನ್ನೇ ಹಿಡಿದು ಬಿಜೆಪಿ ಸೇರಿದರು.

ಎರಡು ಬಾರಿ ಲೋಕಸಭೆಗೆ ಸ್ಪರ್ಧಿಸಿ ಸೋತಿದ್ದ ರೀಟಾ, 2012ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಲಖನೌ ಕಂಟೋನ್ಮೆಂಟ್ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಕಂಡಿದ್ದರು. ಅವರಿಗೆ ರಾಜಕೀಯ ರಂಗ ಹೊಸದೇನಲ್ಲ. ಕುಟುಂಬವೇ ರಾಜಕೀಯ ಹಿನ್ನೆಲೆ ಹೊಂದಿರುವಂಥದು. ತಂದೆ ಹೇಮವತಿ ನಂದನ್ ಬಹುಗುಣ, ತಾಯಿ ಕಮಲಾ ಬಹುಗುಣ. 1949ರ ಜುಲೈ 22ರಂದು ಅಲಹಾಬಾದ್ನಲ್ಲಿ ರೀಟಾರ ಜನನ. ತಂದೆ ಎಚ್.ಎನ್.ಬಹುಗುಣ ಎಂದೇ ಪ್ರಸಿದ್ಧರು. ಅವರು ಉತ್ತರಪ್ರದೇಶದ ಒಂಭತ್ತನೇ ಮುಖ್ಯಮಂತ್ರಿ (08.11.1973-29.11.1975). ಸಹೋದರ ವಿಜಯ್ ಬಹುಗುಣ ಉತ್ತರಾಖಂಡದ ಆರನೇ ಮುಖ್ಯಮಂತ್ರಿ (13.03.2012-31.01.2014)ಯಾಗಿದ್ದರು. ಇವರಿಬ್ಬರೂ ಮೂಲ ಕಾಂಗ್ರೆಸ್ಸಿಗರು. ಇನ್ನೊಬ್ಬ ಸಹೋದರ ಶೇಖರ್ ಬಹುಗುಣ ರಾಜಕೀಯ ವಲಯದಲ್ಲಿ ಪ್ರಭಾವಿಯೇನೂ ಅಲ್ಲ.

ಕುಟುಂಬ ರಾಜಕೀಯ ಇತಿಹಾಸ ಗಮನಿಸಿದರೆ, ಬಂಡಾಯದ ಗುಣ ಇಡೀ ಕುಟುಂಬದಲ್ಲಿ ಹಾಸುಹೊಕ್ಕಿರುವುದು ಕಂಡುಬರುತ್ತದೆ. ಎಚ್.ಎನ್.ಬಹುಗುಣ ಅವರು ಇಂದಿರಾ ಗಾಂಧಿ ನಾಯಕತ್ವದ ವಿರುದ್ಧ ಸಿಡಿದೆದ್ದು 1977ರಲ್ಲಿ ಪಕ್ಷ ತ್ಯಜಿಸಿದ್ದರು. ಬಳಿಕ 1980ರಲ್ಲಿ ಪುನಃ ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದರು. ಇನ್ನು ವಿಜಯ್ ಬಹುಗುಣ ತಮ್ಮ ನಂತರ ಉತ್ತರಾಖಂಡದ ಮುಖ್ಯಮಂತ್ರಿ ಯಾದ ಹರೀಶ್ ರಾವತ್ ವಿರುದ್ಧ ಬಂಡೆದ್ದು ಪಕ್ಷವನ್ನು ತ್ಯಜಿಸಿದ್ದರು. ಈ ರಾಜಕೀಯ ನಡೆಯಲ್ಲಿ ಅವರಿಗೆ ಪುತ್ರ ಸಾಕೇತ್ ಕೂಡ ಸಾಥ್ ನೀಡಿದ್ದರು. ಇದೀಗ ರೀಟಾ ಬಹುಗುಣ ಅವರು ರಾಹುಲ್ ಗಾಂಧಿ ವಿರುದ್ಧ ಸಿಡಿದೆದ್ದು ಪಕ್ಷ ತ್ಯಜಿಸಿದ್ದಾರೆ. ಹೀಗೆ ಮೂವರೂ ಕಾಂಗ್ರೆಸ್ ನಾಯಕತ್ವದ ವಿರುದ್ಧ ಬಂಡೆದ್ದವರೇ. ರೀಟಾ ಸೇರ್ಪಡೆಯಿಂದ ಬಿಜೆಪಿಗೆ ಎಷ್ಟರಮಟ್ಟಿಗೆ ಲಾಭವಾಗುತ್ತದೆ ಎಂಬುದನ್ನು ಕಾದುನೋಡಬೇಕಷ್ಟೆ. ಇನ್ನು ರೀಟಾ ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ಪತಿ ಪಿ.ಸಿ.ಜೋಶಿ, ಸಾರ್ವಜನಿಕ ಕ್ಷೇತ್ರದ ಕಂಪನಿಯೊಂದರಲ್ಲಿ ಜನರಲ್ ಮ್ಯಾನೇಜರ್ ಆಗಿ ನಿವೃತ್ತರಾದವರು. ಪುತ್ರ ಮಯಾಂಕ್. ಇತಿಹಾಸ ವಿಷಯದಲ್ಲಿ ಪಿಎಚ್ಡಿ ಮಾಡಿರುವ ರೀಟಾ, ರಾಜಕೀಯ ಪ್ರವೇಶಕ್ಕೆ ಮುನ್ನ ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಮಧ್ಯಕಾಲೀನ ಹಾಗೂ ಆಧುನಿಕ ಇತಿಹಾಸ ಪಾಠ ಮಾಡುತ್ತಿದ್ದರು.